ಕುಪ್ಪೆಪದವು: ಕುಪ್ಪೆಪದವು ಪರಿಸರದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯುವ ಉದ್ದೇಶದಿಂದ ಇಲ್ಲಿಗೆ ಸಮೀಪದ ದೊಡ್ಡಳಿಕೆ ಎಂಬಲ್ಲಿ ಬೋನ್ ಅಳವಡಿಸಿದ್ದಾರೆ. ಆದರೆ ಚಿರತೆ ಮಾತ್ರ ಅತ್ತ ಸುಳಿದಿಲ್ಲ. ಇತ್ತೀಚೆಗೆ ಬಾರ್ದಿಲ ಎಂಬಲ್ಲಿ ಕಾಡುಪ್ರಾಣಿಯೊಂದ ಹಟ್ಟಿಯಿಂದ ಹಸುವನ್ನು ಎತ್ತಿಕೊಂಡು ಕೊಂದು ಹಾಕಿತ್ತು. ಇದಾದ ಬಳಿಕ ದೊಡ್ಡಳಿಕೆ ಪರಿಸರದಲ್ಲಿ ನಾಲ್ಕು ಸಾಕು ನಾಯಿಗಳು ನಾಪತ್ತೆಯಾಗಿದ್ದವು. ಈ ಪೈಕಿ ಒಂದು ನಾಯಿಯ ಶವ ಪತ್ತೆಯಾಗಿತ್ತು.
ಇದರಿಂದ ಭೀತಿಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಇಲಾಖೆ ಬೋನ್ ಇಟ್ಟ ನಂತರ ದೊಡ್ಡಳಿಕೆಯತ್ತ ಸುಳಿಯದೆ ಇಲ್ಲಿಗೆ ಸಮೀಪದ ಕಟ್ಟೆಮಾರ್ ಎಂಬಲ್ಲಿ ಅಡ್ಡಾಡುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ತೋಟದಲ್ಲಿ ಸ್ಥಳೀಯರು ಚಿರತೆಯನ್ನು ಕಂಡವರಿದ್ದಾರೆ. ಕಲ್ಲಾಡಿಯ ದಡ್ಡಿಗುರಿ ಎಂಬಲ್ಲಿ ಎರಡು ಚಿರತೆಗಳಿದ್ದ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಹಗಲಿನಲ್ಲಿ ಮಾಯವಾಗುವ ಚಿರತೆ ರಾತ್ರಿಯಾಗುತ್ತಿದ್ದಂತೆ ಪ್ರತ್ಯಕ್ಷವಾಗುತ್ತಿದೆ.

ಚಿರತೆಯ ಭಯದಿಂದ ಶಾಲಾ ಮಕ್ಕಳು ಕೂಡಾ ಶಾಲೆಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಅರಣ್ಯ ಇಲಾಖೆ ಬೋನ್ ಇಟ್ಟು ಎರಡು ದಿನ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಬೋನನ್ನು ದೊಡ್ಡಳಿಕೆಯಿಂದ ಬೇರೆಡೆ ಸ್ಥಳಾಂತರಿಸಬೇಕಾಗಿದೆ. ಚಿರತೆಯ ಭೀತಿಯಿಂದ ಭಯಗೊಂಡ ಜನರು ಕತ್ತಲಾವರಿಸುತ್ತಿದ್ದಂತೆ ಬೇಗ ಮನೆ ಸೇರುತ್ತಿದ್ದಾರೆ. ದ್ವಿಚಕ್ರ ಸವಾರರೂ ಕೂಡಾ ಎಲ್ಲಿ ಚಿರತೆ ಎದುರಾಗುತ್ತದೋ ಎಂಬ ಆತಂಕದಿಂದಲೇ ಸಂಚರಿಸುವಂತಾಗಿದೆ. ನಶೆ ಏರಿಸಿಕೊಂಡು ತಡರಾತ್ರಿ ಮನೆ ಸೇರುತ್ತಿದ್ದವರು ಕೂಡ ಇದೀಗ ಚಿರತೆಯ ಭಯದಿಂದ ಬೇಗನೆ ತನ್ನ `ಕಾಯಕ’ ಮುಗಿಸಿ ಮನೆಗೆ ಸೇರುತ್ತಿದ್ದಾರೆ.
ನಿನ್ನೆ ಸಾಯಂಕಾಲ 6 ಗಂಟೆಯ ಸುಮಾರಿಗೆ ಉಳಿಪಾಡಿ ಎಂಬಲ್ಲಿ ಬಾಲಕನೋರ್ವ ಸಮೀಪದ ಗದ್ದೆಯಲ್ಲಿ ಚಿರತೆಯನ್ನು ಕಂಡು ಓಡಿ ಹೋಗಿದ್ದು, ಮಾಹಿತಿ ತಿಳಿದ ನೂರಾರು ಜನರು ಸೇರಿದ್ದರು. ಆದರೆ ಅಲ್ಲಿ ಚಿರತೆಯ ಸುಳಿವೇ ಇರಲಿಲ್ಲ. ಆದರೆ ಇದು ಕೇವಲ ವದಂತಿ ಎಂದು ತಿಳಿದುಬಂದಿದೆ.
