“ಶಿಸ್ತು ಜೀವನದಲ್ಲಿ ತುಂಬಾ ಮುಖ್ಯ. ಇಲ್ಲಿನ ಶಿಸ್ತು ಕಂಡು ರೋಮಾಂಚನವಾಯಿತು. ‘ಎಲ್ಲಿದ್ದರೂ ಸಲ್ಲುವ, ಎಲ್ಲಿದ್ದರೂ ಸಲ್ಲುವ, ವಿದ್ಯೆ ಕಲಿತ ಬಡವ ಎಲ್ಲೆಲ್ಲಿ ಇದ್ದರೂ ಸಲ್ಲುವ ಸರ್ವಜ್ಞ’ ಎನ್ನುವಂತೆ ವಿದ್ಯೆಗೆ ತುಂಬಾ ಮಹತ್ವದ ಶಕ್ತಿ ಇದೆ. ಬೇಡುವವನಿಗೆ ವಿದ್ಯೆ ಸಿಗುತ್ತದೆ. ಹಾಗಾಗಿ ಎಲ್ಲಾ ಮಕ್ಕಳು ವಿದ್ಯೆ ಬೇಡುವ ವಿದ್ಯಾರ್ಥಿಗಳಾಗಬೇಕು ಎಂಬುದು ನನ್ನ ಆಸೆ.” ಎಂದು ರಾಷ್ಟ್ರಪ್ರಶಸ್ತಿ ವಿಜೇತ ಜೋತಿಷಿ ಆದಂತಹ ರಾಮಕೃಷ್ಣ ಪೊದುವಾಳ್ ನುಡಿದರು.
ಡಿ. 29 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಜರುಗಿತು.
“ಮನುಷ್ಯ ಜೀವನ ಸಾಧಾರಣ ವಿಷಯವಲ್ಲ, ಬಹಳ ಪವಿತ್ರವಾದ ಜೀವನ. ಈ ಜೀವನದಲ್ಲಿ ಎಷ್ಟು ಸಾಧನೆ ಮಾಡಬೇಕು ಅಷ್ಟು ಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕು. ಅಂತಹ ಶಕ್ತಿ ಇಲ್ಲಿದೆ. ಇದನ್ನು ಪಡೆದುಕೊಳ್ಳಿ. ಜೀವನದಲ್ಲಿ ಶಿಸ್ತು ಇದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು” ರಾಮಕೃಷ್ಣ ಪೊದುವಾಳ್ ಹೇಳಿದರು.
“ಇಲ್ಲಿನ ಶಿಸ್ತು ಕಂಡಾಗ ಸಂತೋಷವಾಯಿತು. ಸ್ವಯಂ ಶಿಸ್ತು, ಸತ್ಪ್ರಜೆಗಳನ್ನು ಮಾಡುತ್ತದೆ. ಶಿಸ್ತು, ಸಂಸ್ಕಾರ , ಗುಣ-ನಡತೆಯಿಂದ ನಿಮ್ಮನ್ನು ನೀವು ಗುರುತಿಸಿಕೊಳ್ಳಿ” ಎಂದು ಬಾಳ್ತಿಲ ವಲಯದ ಸಿ.ಆರ್.ಪಿ ಆದಂತಂಹ ಆರತಿ ಇವರು ಆಶಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಆದಿಶ್ರೀ ಮತ್ತು ಅನಘಾ ಪ್ರೇರಣಾ ಗೀತೆ ಹಾಡಿದರು. ಆಟೋಟ ಸ್ಪರ್ಧೆ ಹಾಗೂ ಬೌಧ್ಧಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ನೀಡಿ ಅಭಿನಂದಿಸಿದರು. ಶಿಕ್ಷಕರಾದ ಪವಿತ್ರ, ಶಂಕರಿ, ಲಾವಣ್ಯ, ರೇಷ್ಮ ವಿಜೇತರ ಪಟ್ಟಿಯನ್ನು ವಾಚಿಸಿದರು
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ, ಸಹ ಸಂಚಾಲಕರಾದ ರಮೇಶ್, ಡಾ||ಕಮಲಾ ಪ್ರಭಾಕರ್ ಭಟ್, ಆಡಳಿತ ಮಂಡಳಿ ಸದಸ್ಯರಾದ ಚೆನ್ನಪ್ಪ ಆರ್ ಕೋಟ್ಯಾನ್, ಜಯರಾಮ್ ರೈ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ರೇಣುಕ ನಿರೂಪಿಸಿ, ಸಂತೋಷ್ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು.
