ಕುಪ್ಪೆಪದವು: ಚಿರತೆಯೊಂದು ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹೊನ್ನಯ್ಯ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ ದನವನ್ನು ರಾತ್ರಿ ಸುಮಾರು 12 ಗಂಟೆಗೆ ದಾಳಿ ನಡೆಸಿ ಹಸುವನ್ನು ಎಳೆದೊಯ್ದು ಸಮೀಪದ ಗುಡ್ಡೆಯಲ್ಲಿ ಕೊಂದು ಹಾಕಿ ಪರಾರಿಯಾಗಿದೆ. ಚಿರತೆ ದಾಳಿ ನಡೆಸುವ ವೇಳೆ ಮನೆಮಂದಿ ಯಕ್ಷಗಾನ ಬಯಲಾಟಕ್ಕೆ ಹೋಗಿದ್ದರಿಂದ ಹುಲಿಯೋ, ಚಿರತೆಯೋ ಅಥವಾ ಕತ್ತೆಕಿರುಬವೋ ಎಂದು ಗುರುತಿಸಲು ಸಾಧ್ಯವಾಗಿಲ್ಲ.
ಸ್ಥಳೀಯರು ನೀಡಿದ ಮಾಹಿತಿಯಂತೆ ರಾತ್ರಿ ನಾಯಿಗಳು ಬೊಗಳುತ್ತಿದ್ದು, ಹಸುವು ಆರ್ತನಾದಗೈದಿರುವುದು ಕೇಳಿಸಿತ್ತು ಎಂದು ತಿಳಿಸಿದ್ದಾರೆ. ಬೆಳಿಗ್ಗೆ ಹಟ್ಟಿಯಲ್ಲಿ ದನ ನಾಪತ್ತೆಯಾಗಿರುವುದನ್ನು ಕಂಡು ಮನೆಯ ಸುತ್ತಮುತ್ತ ಹುಡುಕಿದಾಗ ಅನತಿ ದೂರದ ಕುರುಚಲು ಪೊದೆಗಳ ನಡುವೆ ಹಸುವು ರಕ್ತಮಿಶ್ರಿತ ಗಾಯಗಳೊಂದು ಸತ್ತಿರುವುದು ಪತ್ತೆಯಾಗಿದೆ. ಹೊಟ್ಟೆ ಸೀಳಿದ್ದು, ಕುತ್ತಿಗೆಯಲ್ಲಿ ಪರಚಿದ ಗಾಯಗಳು ಕಂಡುಬಂದಿದೆ.

hasu

ಮನೆಮಂದಿಗೆ ಸುಮಾರು 10ರಿಂದ 15 ಸಾವಿರ ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅದಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪಶುವೈದ್ಯಾದಿಕಾರಿಗಳು ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ರಾತ್ರಿ 8.30ರ ಸುಮಾರಿಗೆ ಕುಪ್ಪೆಪದವಿನ ಖಾಸಗಿ ಆಸ್ಪತ್ರೆಯೊಂದರ ಕಂಪೌಂಡ್ ಹಾರಿ ಚಿರತೆ ಓಡಿರುವುದನ್ನು ಸ್ಥಳೀಯರು ಕಂಡಿದ್ದರು. ಅಲ್ಲದೆ ಇರುವೈಲು, ಮಜ್ಜಿಗೆಪದವು ಮುಂತಾದ ಪರಿಸರದಲ್ಲಿ ಚಿರತೆಗಳು ಅಡ್ಡಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದರು. ಸಾಕಷ್ಟು ಭಾರವಿರುವ ಹಸುವನ್ನು ಹಟ್ಟಿಯಿಂದ ಎತ್ತಿಕೊಂಡು ಹೋಗಿ ಕೊಂದು ಹಾಕಿರುವುದು ಚಿರತೆ ಇರಬಹುದೆಂದು ಅಂದಾಜಿಸಲಾಗಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ದ್ವಿಚಕ್ರವಾಹನಗಾರರು ಕೂಡಾ ರಾತ್ರಿ ವೇಳೆ ಅಡ್ಡಾಡಲು ಭಯಪಡುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *