ಮೂಡುಬಿದಿರೆ: ಕಾರ್ಮಿಕರ ಸಂಘಟನೆ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 8 ಮತ್ತು 9 ರಂದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿ)ಯು ಹಮ್ಮಿಕೊಂಡ ರಾಷ್ಟ್ರ ವ್ಯಾಪಿ ಮುಷ್ಕರವನ್ನು ಎಲ್ಲಾ ವರ್ಗದ ಕಾರ್ಮಿಕರು ಬೆಂಬಲಿಸಬೇಕು ಎಂದು ಎಐಟಿಯುಸಿ ಜಿಲ್ಲಾ ಮುಖಂಡ ಶೇಖರ್ ಪೂಜಾರಿ ಹೇಳಿದರು.
ಶನಿವಾರ ಮೂಡುಬಿದಿರೆ ಬಸ್‍ನಿಲ್ದಾಣಕ್ಕೆ ಆಗಮಿಸಿದ ಜೆಸಿಟಿಯು ದ.ಕ ಜಿಲ್ಲಾ ಪ್ರಚಾರ ಆಂದೋಲನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿಂದಿನ ಯುಪಿಎ ಸರಕಾರ ಅನುಸರಿಸಿಕೊಂಡು ಬಂದಿರುವ ಕಾರ್ಮಿಕ ವಿರೋಧಿ ನೀತಿಯನ್ನೇ ಈಗಿನ ಎನ್‍ಡಿಎ ಸರ್ಕಾರ ಮುಂದುವರಿಸುತ್ತಿದೆ. ಇದರಿಂದ ದೇಶದ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಸಾಮಾಜಿಕ, ಉದ್ಯೋಗ ಭದ್ರತೆ ಸೇರಿದಂತೆ ಪ್ರಮುಖ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕಾರ್ಮಿಕರ 12 ಅಂಶಗಳ ಬೇಡಿಕೆ ಈಡೇರಿಕೆಗೆ ಈಗಾಗಲೇ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದರೂ ಸರಕಾರ ಅದನ್ನು ನಿರ್ಲಕ್ಷಿಸುತ್ತಾ ಬಂದಿದೆ. ಸರಕಾರದ ಈ ಧೋರಣೆಯಿಂದ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆಂದರು.
ಮೂಡುಬಿದಿರೆ ಕಾರ್ಮಿಕ ಸಂಘಟನೆಯ ಪ್ರಮುಖರಾದ ರಾಧ, ಶಂಕರ್ ವಾಲ್ಪಾಡಿ, ಸೀತಾರಾಮ ಶೆಟ್ಟಿ, ಲಕ್ಷ್ಮೀ ಮತ್ತಿತರರು ಪ್ರಚಾರಾಂದೋಲನದಲ್ಲಿ ಭಾಗವಹಿಸಿದ್ದರು.
