ಮೂಡುಬಿದಿರೆ: ಪಳಕಳ ಪರಿಸರದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಈ ಪರಿಸರಕ್ಕೆ ವಿದ್ಯುತ್ ಒದಗಿಸಬೇಕೆಂದು ಈ ಪರಿಸರದ ನಾಗರಿಕರು
ಇಲ್ಲಿನ ಸಮಾನಮಂದಿರಲ್ಲಿ ಗುರುವಾರ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಬೇಡಿಕೆ ಸಲ್ಲಿಸಿದರು.
ರಾಜೇಶ್ ಕಡಲಕೆರೆ ಮಾತನಾಡಿ, ಈ ಸಬ್ ಸ್ಟೇಶನ್‍ನಿಂದ ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ ಈ ಪರಿಸರಕ್ಕೆ ಯಾವುದೇ ವಿದ್ಯುತ್ ಸಂಪರ್ಕ ಇಲ್ಲ. ಈಗ ಭೂಗತ ಕೇಬಲ್ ಅಳವಡಿಕೆಯ ಕೆಲಸ ನಡೆಯುತ್ತಿದ್ದು ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ. ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಉತ್ತರ ನೀಡಲಿಲ್ಲ.

meskam
ಶಿರ್ತಾಡಿ – ಹೊಸ್ಮಾರು ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆ ಬದಿಯಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿಲ್ಲ. ಈಗಾಗಲೇ ಡಾಮರೀಕರಣ ಕಾಮಗಾರಿಯೂ ಆರಂಭಗೊಂಡಿದ್ದು ಕೂಡಲೇ ಕಂಬಗಳನ್ನು ಸ್ಥಳಾಂತರಿಸಬೇಕು. ದಾರಿದೀಪದ ಸಾಮಾಗ್ರಿಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ವಾಲ್ಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಶೆಟ್ಟಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು. ಶೀಘ್ರವೇ ಕಂಬಗಳಗಳನ್ನು ಸ್ಥಳಾಂತರಿಸುವುದಾಗಿ ಮೆಸ್ಕಾಂ ಸೆಕ್ಷನ್ ಆಫೀಸರ್ ಸತೀಶ್ ಉತ್ತರಿಸಿದರು.
ವಾಲ್ಪಾಡಿ ಉರಿಯಾಳ ಪರಿಸರದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಲವು ಮನೆಗಳಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ನಾಗರಿಕರೊಬ್ಬರು ಬೇಡಿಕೆ ಸಲ್ಲಿಸಿದರು. ದೀನ್ ದಯಾಳ್ ಯೋಜನೆಯಡಿ ಆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಸತೀಶ್ ಉತ್ತರಿಸಿದರು.
ತೋಡಾರು ಪಲ್ಕೆ ಎಂಬಲ್ಲಿ ಗೇರು ಮರಗಳ ನಡುವೆ ವಿದ್ಯುತ್ ತಂತಿಯನ್ನು ಎಳೆದಿದ್ದು ಗೇರು ಕೊಯ್ಯುವ ವೇಳೆ ಅನಾಹುತ ಉಂಟಾಗುವ ಸಂಭವವಿದೆ. ಅದರ ಲೈನ್ ಬದಲಿಸಬೇಕು ಎಂದು ವಲೇರಿಯನ್ ಕುಟಿನ್ಹಾ ಗಮನಕ್ಕೆ ತಂದರು.
ವಾಲ್ಪಾಡಿ, ಶಿರ್ತಾಡಿ ಭಾಗದ ಲೈನ್‍ಮೆನ್‍ಗಳು ರಾತ್ರಿ ಹಗಲೆನ್ನದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಅವರನ್ನು ವರ್ಗಾಯಿಸಬಾರದು ಎಂದು ಅರುಣ್ ಶೆಟ್ಟಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕಾವೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ಚಂದ್ರ ಹಾಗೂ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *