ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ಕೊಡಿಮರ(ಧ್ವಜಸ್ತಂಭ) ಸಮರ್ಪಿಸುತ್ತಿದೆ. ಕೆತ್ತನೆ ಕೆಲಸ ಮುಗಿದ ಬಳಿಕ 8,000 ಲೀಟರ್ ಶುದ್ಧ ಎಳ್ಳೆಣ್ಣೆಯಲ್ಲಿ ಅದ್ದಿಟ್ಟ ಕೊಡಿಮರ ಹೊರತೆಗೆಯಲಾಗಿದೆ. ಇನ್ನುಳಿದಂತೆ ದೇವಸ್ಥಾನದಲ್ಲಿ ಕೊಡಿಮರ ಸ್ಥಾಪನೆಗೆ ಮುಂಚೆ ನಡೆಯಬೇಕಿರುವ ಉಳಿದ ವಿಧಿವಿಧಾನಗಳು ಒಂದರ ಬಳಿಕ ಒಂದರಂತೆ ನಡೆಯುತ್ತಿವೆ.

ಶ್ರೀ ಕೃಷ್ಣ ಆಚಾರ್ಯರ ನೇತೃತ್ವದ ನುರಿತ ಶಿಲ್ಪಿಗಳು ಕೊಡಿಮರಕ್ಕೆ ಅಗತ್ಯವಿರುವ ಆಧಾರ ಶಿಲೆ, ಕೊಳವೆಕಲ್ಲು, ದಂಬೆಕಲ್ಲಿನ ಕೆತ್ತನೆಯ ಶಿಲಾಕೃತಿ ಕೆಲಸ ಈಗಾಗಲೇ ಪೂರ್ಣಗೊಳಿಸಿದ್ದಾರೆ. ಐದಡಿ ಎತ್ತರ ಮತ್ತು ಮೂರಡಿ ಅಗಲದ ನವಿಲಿನ ಹುಬ್ಬು ಚಿತ್ರವಿರುವ ಬೆಳ್ಳಿಯ ಗರುಡಧ್ವಜದ ಕೆಲಸ ಮುಗಿಯುವ ಹಂತದಲ್ಲಿದೆ.

ಕೊಡಿಮರಕ್ಕೆ 2,500 ಕಿಲೋ ಕಂಚಿನ ಹೊದಿಕೆಯ ಕೆಲಸ ಮುಂದುವರಿದಿದೆ. ಕೇರಳದ ಪ್ರಸಿದ್ಧ ಶಿಲ್ಪಿ ವಿ ಪಿ ಪ್ರಕಾಶ್ ನೇತೃತ್ವದ ಕಲಾಕಾರರು ಧ್ವಜಸ್ತಂಭದ ತುತ್ತತುದಿಗೆ ಪಂಚಲೋಹಕ್ಕೆ ಚಿನ್ನದ ಲೇಪನವಿರುವ ನವಿಲಿನಾಕೃತಿ ರಚಿಸುತ್ತಿದ್ದಾರೆ.

ಡಿ. 28ರಂದು ಕೊಡಿಮರ ಸ್ಥಾಪನೆಗೆ ಕಾರ್ಕಳದ ಶ್ರೀ ಕೃಷ್ಣ ಆಚಾರ್ಯರ ಕಾರ್ಯಾಗಾರದಿಂದ `ಆಧಾರಶಿಲೆ’ ಅಥವಾ ಧ್ವಜಸ್ತಂಭ ಪೀಠ ತರಲಾಗುವುದು.

ಸದ್ಭಕ್ತರ ಕೂಡುವಿಕೆಯೊಂದಿಗೆ ಕಾರ್ಕಳದಿಂದ ಹೊರಡುವ ಮೆರವಣಿಗೆ ಮಧ್ಯಾಹ್ನ ಒಂದು ಗಂಟೆಗೆ ಮೂಡಬಿದ್ರೆ ತಲುಪಲಿದೆ. ಅಲ್ಲಿನ ಶ್ರೀ ಮುಖ್ಯಪ್ರಾಣ ಹಾಗೂ ಮಾರಿಗುಡಿಯಲ್ಲಿ ತುಸು ನಿಲುಗಡೆಯಾಗಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮುಂದುವರಿಯಲಿದೆ. ಎಡಪದವು ತಲುಪುತ್ತಲೇ ಸ್ಥಳೀಯ ಶ್ರೀರಾಮ ಭಜನಾ ಮಂದಿರದಲ್ಲಿ ನಿಲುಗಡೆಯಾಗಲಿದ್ದು, ಭಕ್ತರಿಗೆ ಧ್ವಜಪೀಠ ಶಿಲೆಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಧ್ಯಾಹ್ನ 2.30ಕ್ಕೆ ಗಂಜಿಮಠದಲ್ಲಿ ಶ್ರೀ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಯಲಿದ್ದು, ಅಪರಾಹ್ನ 3:15ಕ್ಕೆ ಕೈಕಂಬ ತಲುಪಲಿದ್ದು, ಸಾರ್ವಜನಿಕ ದರ್ಶನದ ಬಳಿಕ 4 ಗಂಟೆಗೆ ಶ್ರೀ ಕ್ಷೇತ್ರ ಪೊಳಲಿಗೆ ಸಾಗಲಿದೆ. ಭಕ್ತ ಮಹಜನರು ಅಂದು ಅಪರಾಹ್ನ 2:30ಕ್ಕೆ ಗಂಜಿಮಠ ಶ್ರೀ ಗಣಪತಿ ದೇವಸ್ಥಾನದ ಬಳಿ ಜಮಾಯಿಸಿ, ಅಲ್ಲಿಂದ ತಮ್ಮ ಸ್ವಂತ ವಾಹನಗಳಲ್ಲಿ ಜಾಥಾ ಮೂಲಕ ದೇವಸ್ಥಾನದತ್ತ ಸಾಗಬೇಕಾಗಿ ವಿನಂತಿ.

 

ಕೊಡಿಮರಕ್ಕೆ ಸಂಬಂಧಿಸಿ

ಇತರ ಧಾರ್ಮಿಕ ಕಾರ್ಯಕ್ರಮ :

ಡಿ. 28ರಂದು ಕೊಡಿಮರ ಆಧಾರಶಿಲೆ ಕ್ಷೇತ್ರಕ್ಕೆ ಆಗಮನ * ಡಿ. 31ರಂದು ಬೆಳಿಗ್ಗೆ 9:40-10ರವರೆಗೆ ಶಿಲಾನ್ಯಾಸಕ್ಕೆ ದ್ರವ್ಯಾನ್ಯಾಸ * ಜನವರಿ 2ರಂದು ಸಂಜೆ 7ಕ್ಕೆ ಮರಕ್ಕೆ ಕುತ್ತಿಪೂಜೆ * ಜ. 10ರಂದು ಬೆಳಿಗ್ಗೆ 9:50ರಿಂದ 10:00 ಕಂಚಿನವರಿಂದ ತಾಮ್ರ ಹೊಡೆಯುವಿಕೆ * ಜ. 21ರಂದು 8:30 ಧ್ವಜಸ್ತಂಭ ಸ್ಥಾಪನೆ

By Suddi9

Leave a Reply

Your email address will not be published. Required fields are marked *