ಮೂಡುಬಿದಿರೆ: ಮೆಸ್ಕಾಂ ವತಿಯಿಂದ ವಿದ್ಯುತ್ ಮೀಟರ್ ಬದಲಾವಣೆ ಮಾಡುವಂತೆ ದಿಢೀರ್ ಆದೇಶ ಹೊರಡಿಸಲಾಗಿದೆ. ಅವರಂತೆ ಕೆಲವೊಂದು ಹುಡುಗರು ಮನೆ ಮನೆಗೆ ಬಂದು ಮೀಟರ್ ಬದಲಾಯಿಸಲು ಮುಂದಾಗಿದ್ದಾರೆ. ಆದರೆ ಈ ವಿಷಯ ಸಾರ್ವಜನಿಕರಿಗೆ ಪೂರ್ವಭಾವಿಯಾಗಿ ತಿಳಿಸದಿರುವುದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.
ಹೊಸ ಡಿಜಿಟಲ್ ಮೀಟರ್ ಅಳವಡಿಸುವ ಕೆಲಸಕ್ಕೆ ಮೂಡುಬಿದಿರೆ ವ್ಯಾಪ್ತಿಯಲ್ಲಿ ಈಗಾಗಲೇ ಚಾಲನೆ ದೊರೆತಿದ್ದು, ಈ ವ್ಯಾಪ್ತಿಯ ಸಾವಿರಾರು ಮೀಟರುಗಳನ್ನು ಬದಲಾಯಿಸುವ ಗುತ್ತಿಗೆದಾರರ ಕಡೆಯವರು ಮನೆ ಮನೆಗೆ ಬಂದು ಮೀಟರ್ ಬದಲಾಯಿಸುತ್ತೇವೆ ಎಂದಾಗ ಸಾರ್ವಜನಿಕರು ಗೊಂದಲಕ್ಕೊಳಗಾಗುತ್ತಿದ್ದಾರೆ. ಈ ಬಗ್ಗೆ ಮೆಸ್ಕಾಂ ಯಾವ ಪೂರ್ವ ಸೂಚನೆಯನ್ನೂ ನೀಡಿರುವುದಿಲ್ಲ.
ಈ ಮೀಟರ್ ಬದಲಾವಣೆಯ ಕೆಲಸವನ್ನು ದಾವಣಗೆರೆ ಮೂಲದ ಗುತ್ತಿಗೆದಾರರು ಎನ್ನಲಾಗುತ್ತಿದ್ದು ಅವರ ಕಡೆಯ ಅಪರಿಚಿತ ಕೆಲವು ಹುಡುಗರು ರಜಾದಿನವಾದ ರವಿವಾರವೂ ಅಪರಾಹ್ನದ ವೇಳೆಗೆ ಪೇಟೆಯಲ್ಲಿ ಕೆಲವು ಮನೆಗಳಿಗೆ ತೆರಳಿ ಈ ದಿಢೀರ್ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಒಂದೆರಡು ಕಡೆ ನಾವು ಮೆಸ್ಕಾಂನವರು ಎಂದು ಮೀಟರ್ ಬೋರ್ಡಿಗೆ ಕೈಹಾಕಿದವರನ್ನು ಕಂಡು ಮನೆಮಂದಿಗೆ ಗೊಂದಲ, ಆತಂಕವಾಗಿದೆ.
ಮೀಟರ್ ಬದಲಾವಣೆಗೆ ಬರುವ ಹುಡುಗರಲ್ಲಿ ಮೆಸ್ಕಾಂ ನಂಬರಿದ್ದು, ಕರೆ ಮಾಡಿದರೆ ಆರ್ಡರ್ ನೀಡಿರುವುದಾಗಿ ಸೂಚಿಸಲಾಗಿದೆ. ಇನ್ನು ಕರೆ ಮಾಡಿದ ನಂತರ ನಮ್ಮ ನಂಬರ್ ಕೊಟ್ಟೋರ್ಯಾರು? ಎಂದು ಕರೆ ಮಾಡಿದ ಸಾರ್ವಜನಿಕರನ್ನೇ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಮೂಡುಬಿದಿರೆ ಮೆಸ್ಕಾಂನ ಸೆಕ್ಷನ್ ಆಫೀಸರ್‍ಗೆ ಕರೆ ಮಾಡಿದಾಗ ಹೌದು ಬದಲಾಯಿಸಲು ಅವಕಾಶ ಕೊಡಿ. ಹಣ ಕೊಡುವುದು ಬೇಡ ಎಂದು ಸಲಹೆ ಸಿಕ್ಕಿದೆ.
ಈಗಿರುವ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್ ಬದಲಾಗಿ ಹೊಸ ಎಲೆಕ್ಟ್ರಾನಿಕ್ಸ್ ಸ್ಟಾಟಿಕ್ ಎನರ್ಜಿ ಮೀಟರ್ ಅಳವಡಿಸುವ ಈ ಕೆಲಸ ರಾಜಶ್ರೀ ಎಲೆಕ್ಟ್ರಿಕಲ್ಸ್ ಹೆಸರಿನ ಗುತ್ತಿಗೆದಾರರ ಮೂಲಕ ನಡೆದಿದೆ. ಈ ಹುಡುಗರಲ್ಲಿ ಸೂಕ್ತ ಆದೇಶದ ಪ್ರತಿ, ಗುರುತು ಚೀಟಿ, ಜತೆಗೆ ಮೆಸ್ಕಾಂ ಕಡೆಯಿಂದ ಸೂಚನೆಯೇ ಇಲ್ಲದ ಕಾರಣ ಹೋದಲೆಲ್ಲ ಸಂಕಷ್ಟಕ್ಕೆ ಗುರಿಯಾಗಿರುವ ಈ ತಂಡ ಹದಿನೈದು ನಿಮಿಷದಲ್ಲಿ ಕೆಲಸ ಮುಗಿಸುತ್ತಿದ್ದಾರೆ.

