ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜೀಪನಡು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯೊಂದಕ್ಕೆ ಇಬ್ಬರು ತಂಙಳ್ ಭೇಟಿ ನೀಡಿರುವುದನ್ನು ಆಕ್ಷೇಪಿಸಿ ಸ್ಥಳೀಯ ಜಮಾಅತ್ನ ಗ್ರಾಮಸ್ಥರು ಬುಧವಾರ ಸಂಜೆ ಧಿಡೀರ್ ಜಮಾಯಿಸಿ ಆಕ್ಷೇಪಿಸಿದ ಘಟನೆ ನಡೆದಿದೆ. 
ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ವತಿಯಿಂದ ನಿರ್ಮಾಣಗೊಂಡ ಮಸೀದಿ ಉದ್ಘಾಟನೆ ಪ್ರಯುಕ್ತ ಬುಧವಾರ ಸಂಜೆ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಗೆ ಉಳ್ಳಾಲ ಖಾಝಿ ಕೂರ ತಂಙಳ್ ಮತ್ತು ಆದೂರು ತಂಙಳ್ ಆಗಮಿಸಿದ್ದರು. ಇದಕ್ಕೆ ಸ್ಥಳೀಯ ಸುನ್ನಿ ಸ್ಟುಡೆಂಟ್ಸ್ಗೆ ಸೇರಿದ ಮಸೀದಿ ಸದಸ್ಯರು ಪೊಲೀಸರ ಮೂಲಕ ಆಕ್ಷೇಪಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಮಸೀದಿ ಬಳಿ ಎರಡೂ ಗುಂಪಿನ ಯುವಕರು ಜಮಾಯಿಸಿದಾಗ ಉದ್ವಿಗ್ನತೆ ಉಂಟಾಗಿದೆ. ಇದೇ ವೇಳೆ ಯುವಕರ ಗುಂಪೊಂದು ವಾಹನವೊಂದಕ್ಕೆ ಕಲ್ಲುತೂರಾಟ ನಡೆಸಿದ ಬಳಿಕ ಒಬ್ಬರಿಗೆ ಹಲ್ಲೆ ನಡೆಸಿದ್ದಾರೆ ಎಂಬ ವದಂತಿ ಹರಡಿದ್ದು, ತಕ್ಷಣವೇ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರಶ್ಮಿ ಪೆರಡ್ಡಿ, ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಎಸೈ ನಾಗರಾಜ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸರು ಧಾವಿಸಿ ಬಿಗಿ ಬಂದೋಬಸ್ತು ಏರ್ಪಡಿಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಉದ್ವಿಗ್ನಗೊಂಡಿದ್ದ ಜನರನ್ನು ಸಮಾಧಾನಗೊಳಿಸಿ, ರಾತ್ರಿ ವೇಳೆ ಹೆಚ್ಚುವರಿ ಪೊಲೀಸ್ ನಿಯೋಜನೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
