ಮೂಡುಬಿದಿರೆ: ಮುಖ್ಯ ಶಿಕ್ಷಕರೋರ್ವರ ವರ್ಗಾವಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಇಲ್ಲಿನ ತಹಶಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮನ ಪ್ರಕಾಶ್ ಅವರು, ಕೋಟೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನರಲ್ ಇಲ್ಲಿನ ಮುಖ್ಯೋಪಧ್ಯಾಯರಾಗಿರುವ ಸುಧಾಕರ ಸಾಲ್ಯಾನ್‍ರವರಿಗೆ ಸರಕಾರದ ವರ್ಗಾವಣೆ ನಿಯಮದಲ್ಲಿ ವಿನಾಯಿತಿ ಇದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿ ಈ ನಿಯಮವನ್ನು ನಿರ್ಲಕ್ಷಿಸಿ ಮುಖ್ಯೋಪಧ್ಯಾಯರನ್ನು ವರ್ಗಾವಣೆ ಮಾಡಿದ್ದಾರೆ. ಶಾಲೆ ಪ್ರಾರಂಭವಾಗಿ ಕೆಲವು ತಿಂಗಳ ಬಳಿಕ ಈ ರೀತಿ ಶಿಕ್ಷಕರ ವರ್ಗಾವಣೆ ಮಾಡಿರುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಈ ರೀತಿಯಾದರೆ ಘಟನೆಗಳು ಮರಕಳಿಸುತ್ತಿದ್ದರೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಸರಕಾರಿ ಶಾಲೆ ಮುಚ್ಚುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಬಳಿಕ ಉಪತಹಶಿಲ್ದಾರ್ ನಿತ್ಯಾನಂದದಾಸ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಒಂದೇ ಶಾಲೆಯಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೇವೆಯಲ್ಲಿದ್ದ ಶಿಕ್ಷಕರನ್ನು ವರ್ಗಾವಣೆ ಮಾಡಬೇಕೆಂಬ ಸರಕಾರದ ನಿಯಮಾನುಸಾರ ಸುಧಾಕರ ಸಾಲ್ಯಾನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ನಿಯಮದಲ್ಲಿ ಅವರಿಗೆ ವಿನಾಯಿತಿ ಇರುವುದಿಲ್ಲ. ಸರಕಾರದ ಆದೇಶವನ್ನು ಮೇಲಾಧಿಕಾರಿಗಳ ನಿರ್ದೇಶನದ ಪ್ರಕಾರ ನಾನು ಅನುಷ್ಠಾನಗೊಳಿಸಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಆದರೆ ಸುಧಾಕರ್ ಸರಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಸಮವಸ್ತ್ರದಲ್ಲಿ ಪ್ರತಿಭಟನೆಗೆ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯೋಪಧ್ಯಾಯರಿಗೆ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೇಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

