ಮೂಡುಬಿದಿರೆ: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಅರಣ್ಯಾಧಿಕಾರಿಗಳು ಬೆಳುವಾಯಿ ಸಮೀಪ ಕೆಸರುಗದ್ದೆಯಲ್ಲಿ ಸೋಮವಾರ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪಡುಮಾರ್ನಾಡು ನಿತಿನ್ ಹಾಗೂ ಸಂದೀಪ್ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದವರು. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಸುಮಾರು 3ಲಕ್ಷ ರೂಪಾಯಿಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆದಿದ್ದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ಅಚ್ಚಪ್ಪ ಅವರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.
ಉಪವಲಯ ಅರಣ್ಯಾಧಿಕಾರಿಗಳಾದ ಅಶ್ವಿತ್ ಗಟ್ಟಿ, ಮಂಜುನಾಥ ಗಾಣಿಗ, ಅರಣ್ಯ ರಕ್ಷಕರಾದ ವಿನಾಯಕ, ಸಂದೀಪ್, ವಾಹನ ಚಾಲಕ ಮಿಥುನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

