ಬಂಟ್ವಾಳ: ರಾಜ್ಯದಲ್ಲೇ ಪ್ರಥಮ ಬಾರಿಗೆ ಮತ್ತು ಗರಿಷ್ಟ ಪ್ರಮಾಣದಲ್ಲಿ 94ಸಿ ಹಕ್ಕುಪತ್ರವನ್ನು ವಿತರಿಸಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರೇರಿತ ಅದ್ದೂರಿ ಕಾರ್ಯಕ್ರಮ ತಾಲ್ಲೂಕು ಮಟ್ಟದಲ್ಲಿ ನಡೆಸುವುದರ ಬದಲಾಗಿ ಪ್ರತೀ ಗ್ರಾಮ ಪಂಚಾಯಿತಿನಲ್ಲಿ ಜನರ ಬಳಿಗೆ ತೆರಳಿ ಹಕ್ಕುಪತ್ರ ಮತ್ತಿತರ ಸೌಲಭ್ಯ ವಿತರಿಸುತ್ತಿರುವ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರ ಸೇವೆ ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ರಾಯಿ ಗ್ರಾಮ ಪಂಚಾಯಿತ್‍ನಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ 94ಸಿ ಹಕ್ಕುಪತ್ರ ಮತ್ತಿತರ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಥಮ ಬಾರಿಗೆ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ರೂ.5ಲಕ್ಷ ವೆಚ್ಚದ ‘ಆಯುಷ್ಮಾನ್ ಭವ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಅರ್ಹ ಫಲಾನುಭವಿ ಧರ್ಣಮ್ಮ ಅನಾವುದಕೋಡಿ ಇವರಿಗೆ ‘ಉಜ್ವಲ ಯೋಜನೆ’ಯಡಿ ಮಂಜೂರಾದ ಅಡುಗೆ ಅನಿಲ ಸಾಮಾಗ್ರಿ ವಿತರಿಸಲಾಯತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರು 70 ಮಂದಿಗೆ 94ಸಿ ಹಕ್ಕುಪತ್ರ, ರಾಷ್ಟ್ರೀಯ ಕುಟುಂಬ ಸಹಾಯಧನ, ಪ್ರಾಕೃತಿಕ ವಿಕೋಪ ಯೋಜನೆಯಡಿ ಮಂಜೂರಾದ ಚೆಕ್ ವಿತರಿಸಿ ಮಾತನಾಡಿದರು.
ಇದೇ ವೇಳೆ ಪಂಚಾಯಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ರೈತರಿಗೆ ಸಾಲಮನ್ನಾ ಹಣವೂ ದೊರೆತಿಲ್ಲ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವೂ ಸಿಗುತ್ತಿಲ್ಲ ಎಂದು ಆರೋಪಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಷ್ಪಲತಾ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಕುಸುಮಾ, ಯಶೋಧ, ಪಿಡಿಒ ವೆಂಕಟೇಶ ಮತ್ತಿತರರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಪ್ರಮುಖರಾದ ಕೆ.ಪರಮೇಶ್ವರ ಪೂಜಾರಿ, ಚಂದಪ್ಪ ಪೂಜಾರಿ, ಗ್ರಾಮಕರಣಿಕ ಪರೀಕ್ಷತ್ ಮೂಡುಬಿದಿರೆ, ಸಹಾಯಕ ರಮೇಶ ಹೊಕ್ಕಾಡಿಗೋಳಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಂದಾಯ ನಿರೀಕ್ಷಕ ನವೀನ್ ಕುಮಾರ್ ಬೆಂಜನಪದವು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗ್ರಾಮಕರಣಿಕರ ಸಂಘದ ಅಧ್ಯಕ್ಷ ಜನಾರ್ದನ ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.
