ಕೈಕಂಬ: ಆ್ಯಂಬುಲೆನ್ಸಿನಲ್ಲಿ ಮನೆ ಬಾಗಿಲಿಗೆ  ಸಮೀರನ ಶವ ಆಗಮನವಾಗುತ್ತಲೇ, ಶವಕ್ಕಾಗಿ ರಾತ್ರಿಯಿಂದ ಅತ್ತು ಕಾದು ಕೂತಿದ್ದ ವಯೋವೃದ್ಧ ಅಹಮ್ಮದ್ ಸಾಹೇಬರ ಕಣ್ಣುಗಳಲ್ಲಿ ಒಂದೇ ಸಮನೆ ಕಣ್ಣೀರ ಕೋಡಿ ಹರಿಯಿತು. ಸಹೋದರ, ಸಹೋದರಿಯರು ಮತ್ತು ತಾಯಿಯ ಅಳುವಿಗೆ ಪಾರಾವೇ ಇರಲಿಲ್ಲ. ಮನೆ ಎದುರು ನೂರಾರು ಮಂದಿ ಸೇರಿದ್ದು, ಎಲ್ಲರೂ ಸಮೀರನ ದುಃಖದ ಮಡುವಲ್ಲಿ ಮುಳುಗಿದ್ದರು.25vpmhamad shameer

ಒಂದು ತಿಂಗಳ ಹಿಂದೆಯಷ್ಟೇ ಗಲ್ಫ್ ರಾಷ್ಟ್ರದಿಂದ ಊರಿಗೆ ಆಗಮಿಸಿದ್ದ ಸಮೀರ್ ಇನ್ನೇನು ಕೆಲವೇ ದಿನಗಳಲ್ಲಿ ವಿದೇಶಕ್ಕೆ ಮರಳುವವರಿದ್ದರು. ಈ ಮಧ್ಯೆ ಸೆ. 13ರಂದು ಸಮೀರ್ ಪತ್ನಿ ಮತ್ತು ಪುಟ್ಟ ಮಗು ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ಮುಂದಕ್ಕೆ ಎಲ್ಲವೂ ನಿಗೂಢವಾಗಿದೆ. ಆದರೆ ಸಮೀರ ಮಾತ್ರ ಇಹಲೋಕ ತ್ಯಜಿಸಿದ್ದು, ಇದೊಂದು ಪೂರ್ವ ನಿಯೋಜಿತ ಕೊಲೆಯೆಂದು ಸ್ಥಳದಲ್ಲಿದ್ದ ಕೆಲವು ಮುಸ್ಲಿಂ ಬಂಧುಗಳು ಹೇಳಿಕೊಳ್ಳುತ್ತಿದ್ದರು. ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಗಂಜಿಮಠದ ಮಸೀದಿ ಎದುರು ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮೀರ್ ಅಂತ್ಯಸಂಸ್ಕಾರ ನಡೆಸಲಾಯಿತು.

“ಸೆ. 17ರಂದು ಬೆಂಗಳೂರು ಅಥವಾ ತಮಿಳುನಾಡಿನಲ್ಲಿ ಸಮೀರ್ ಕೊಲೆ ನಡೆದಿರಬೇಕು. ಆ ಹೊತ್ತಿಗೆ ಪತ್ನಿ ಫಿರ್ದೌಸ್ ಬೆಂಗಳೂರಿಂದ ಮಗುವಿನ ಜೊತೆ ಕಾಪುವಿನ ತಂದೆ ಮನೆಗೆ ಮರಳಿದ್ದಳು. ಈ ಕೊಲೆಯಲ್ಲಿ ಪತ್ನಿ ಮತ್ತು ಆಕೆಯ ಗೆಳೆಯರ ಕೈವಾಡವಿರುವುದು ಖಚಿತ. ಕಾರ್ಕಳದ ಆಸೀಫ್ ಮತ್ತು ಇನ್ನೊಬ್ಬ ಆಸೀಫ್, ಸಮೀರ್‍ನನ್ನು ಉಪಾಯದಿಂದ ಬೆಂಗಳೂರಿಗೆ ಬರಮಾಡಿಕೊಂಡು ಕೊಲೆ ಮಾಡಿ, ಸಾಕ್ಷ್ಯಿ ನಾಶ ಮಾಡುವ ಉದ್ದೇಶದಿಂದ ಮುಖಕ್ಕೆ ಆ್ಯಸಿಡ್ ಎರಚಿರಬೇಕು. ಕೌಟುಂಬಿಕ ಕಲಹಗಳೇನೇ ಇದ್ದರೂ, ಒಂದು ಜೀವ ತೆಗೆಯುವ ದುಸ್ಸಾಃಹಸಕ್ಕೆ ಕೈಹಾಕಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸಾಹೇಬರ ಹತ್ತಿರದ ಬಂಧುವೊಬ್ಬರು ಹೇಳಿದರು.

ಬಜ್ಪೆ ಠಾಣೆಯಲ್ಲಿ ಸಮೀರ್ ಹಾಗೂ ಕಾಪು ಪೊಲೀಸ್ ಠಾಣೆಯಲ್ಲಿ ಫಿರ್ದೌಸ್ ನಾಪತ್ತೆ ದೂರು ದಾಖಲಾಗಿದೆ. ಅತ್ತ ಈಕೆಗೆ ಗೆಳೆಯ ಎನ್ನಲಾಗಿರುವ ಕಾರ್ಕಳದ ಆಸೀಫ್ ನಾಪತ್ತೆ ಬಗ್ಗೆ ಬೆಂಗಳೂರಿನ ಬಾಣಸವಾಡಿಯಲ್ಲಿ ದೂರು ದಾಖಲಾಗಿದೆ. ತಮಿಳುನಾಡಿನ ದೇವತಾನಪಟ್ಟಿ ಪೊಲೀಸ್ ಠಾಣೆಯಲ್ಲಿ ಸಮೀರ್ ಶವ ಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *