ಮೂಡುಬಿದಿರೆ: 2015ರಲ್ಲಿ ನಡೆದ ಬಜರಂಗದಳ ಕಾರ್ರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳಲೊಬ್ಬರಾದ ಕರಿಂಜೆ ಗ್ರಾಮದ ಗಂಟಾಲ್‍ಕಟ್ಟೆಯ ಬಾವು ಬ್ಯಾರಿ ಮಗ ಇಮ್ತಿಯಾಜ್(29)ನನ್ನು ಐವರು ದುಷ್ಕರ್ಮಿಗಳ ತಂಡವೊಂದು ಸೋಮವಾರ ಬೆಳಿಗ್ಗೆ ಗಂಟಾಲ್‍ಕಟ್ಟೆಯಲ್ಲಿರುವ ಆತನ ಹೊಟೇಲ್‍ನಲ್ಲಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಇಮ್ತಿಯಾಸ್ ಅವರ ತಲೆ, ಕೈ ಹಾಗೂ ಬೆನ್ನಿಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಹೊಸಂಗಡಿ ಕಡೆಯಿಂದ ಸಿಲ್ವರ್ ಬಣ್ಣದ ಇನ್ನೋವಾ ಕಾರೊಂದು ಗಂಟಾಲ್‍ಕಟ್ಟೆಯಲ್ಲಿರುವ ಇವರ ಬದ್ರಿಯಾ ಹೋಟೆಲ್ ಎದುರು ಬಂದು ನಿಂತಿತ್ತು. ಚಾಲಕ ಕಾರಿನಲ್ಲೆ ಇದ್ದರೆ, ಉಳಿದ ನಾಲ್ವರು ಹೋಟೆಲ್‍ಗೆ ಬಂದು ಚಾ ಕೇಳಿದರು. ಇಮ್ತಿಯಾಸ್ ಚಾ ಮಾಡಲೆಂದು ಒಳಗಡೆ ತೆರಳಿದಾಗ ದುಷ್ಕರ್ಮಿಗಳು ಆತನ ಮೇಲೆ ದಾಳಿ ನಡೆಸಿ ತಲವಾರಿನಿಂದ ಹಲ್ಲೆ ಮಾಡಿದ್ದಾರೆ. ತಲವಾರನ್ನು ಕೈಯಲ್ಲಿ ಬಲವಾಗಿ ಹಿಡಿದ ಇಮ್ತಿಯಾಜ್ ಆರೋಪಿಗಳನ್ನು ತಳ್ಳಿ ಹಿಂಬಾಗಿಲಿನಿಂದ ಮಸೀದಿ ಕಡೆ ಓಡಿ ಹೋಗಿ ಜೀವ ಉಳಿಸಿಕೊಂಡರು. ನಂತರ ಹಲ್ಲೆ ನಡೆಸಿದ ಆರೋಪಿಗಳು ಇನ್ನೋವಾ ಕಾರಿನಲ್ಲಿ ಮೂಡುಬಿದಿರೆ ಕಡೆ ಪರಾರಿಯಾದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಹೋಟೆಲ್ ಕಾರ್ಮಿಕ ಇಬ್ರಾಹಿಂ(23) ಆರೋಪಿಗಳಿಂದ ತಪ್ಪಿಸಿಕೊಂಡು ಹೊರ ಓಡಿದ್ದಾರೆ.

ಪ್ರಶಾಂತ್ ಪೂಜಾರಿ ಕೊಲೆ ಆರೋಪಿ: ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ 14 ಆರೋಪಿಗಳ ಪೈಕಿ ಇಮ್ತಿಯಾಸ್ ಹಾಗೂ ಆತನ ಸಹೋದರ ಬದ್ರುದ್ದೀನ್ ಹೆಸರು ಕೂಡ ಇತ್ತು. ಕೆಲವು ದಿನ ಇವರು ಜೈಲಿನಲ್ಲಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ಪ್ರಕರಣ ಇನ್ನೂ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿದೆ. ಈ ಘಟನೆಯ ನಂತರ ಇಮ್ತಿಯಾಸ್ ವಿದೇಶದಿಂದ ಉದ್ಯೋಗ ಬಿಟ್ಟು ಗಂಟಾಲ್‍ಕಟ್ಟೆಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದ. ಈ ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸ್ ಕಮಿಷನರ್ ಟಿ. ಸುರೇಶ್ ಹಾಗೂ ಇತರ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಯತ್ನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹೋಟೆಲ್ ಎದುರು ಜಮಾಯಿಸಿದ್ದಾರೆ. ಮಸೀದಿಗೆ ನಮಾಜಿಗೆ ಬಂದವರು ಕೂಡ ಸ್ಥಳದಲ್ಲಿ ಸೇರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

