ಬಂಟ್ವಾಳ: ಇಲ್ಲಿ ಸುಮಾರು 43 ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಪ್ರತಿಷ್ಠಿತ ಪುರಸಭೆಯಲ್ಲಿ ಉದ್ಯೋಗ ಭದ್ರತೆ, ನಿಗದಿತ ವೇತನ, ವಿಮೆ ಮತ್ತಿತರ ಸೇವಾ ಸೌಲಭ್ಯ ಇಲ್ಲದೆ ಕಂಗೆಟ್ಟಿರುವ ಪೌರ ಕಾರ್ಮಿಕರಿಗೆ ಈ ಬಾರಿ ‘ಪೌರ ಕಾರ್ಮಿಕರ ದಿನಾಚರಣೆ’ ಪ್ರಯುಕ್ತ ಶನಿವಾರ ಕ್ರೀಡಾಕೂಟ  ಆಯೋಜಿಸಲಾಯಿತು.

pursabhe spl (1)

ಇಲ್ಲಿನ ಪುರಸಭೆಯಲ್ಲಿ ಕಳೆದ ಏಳು ವರ್ಷಗಳಿಂದ ಗದಗ, ಬಳ್ಳಾರಿ, ಬಾಗಲಕೋಟೆ, ಹಾವೇರಿ ಜಿಲ್ಲೆಯ ಸುಮಾರು 41 ಮಂದಿ ವಲಸೆ ಕಾರ್ಮಿಕರು ಶುಚಿತ್ವ, ಕಸ, ತ್ಯಾಜ್ಯ ವಿಲೇವಾರಿ ಮತ್ತಿತರ ಕೆಲಸಗಳಲ್ಲಿ ತೊಡಗಿಕೊಂಡು ಕುಟುಂಬ ಸಮೇತ ತಾಲ್ಲೂಕಿನ ಅಲ್ಲಲ್ಲಿ ಬಾಡಿಗೆ ಮನೆಗಳಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಸೇರಿದವರಾಗಿದ್ದು, ಇನ್ನೊಂದೆಡೆ ಅನಕ್ಷರಸ್ತರು ಮತ್ತು ಪ್ರಾಥಮಿಕ ಶಿಕ್ಷಣ ಪೂರೈಸಿದವರು ಮಾತ್ರ ಇದ್ದಾರೆ. ಇವರ ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ವ್ಯಾಸಂಗ ಮಾಡುತ್ತಿದ್ದು, ಉಳಿದಂತೆ ಇವರಿಗೆ ಹಾಜರಾತಿ, ವಾರದ ರಜೆ, ವೇತನ ಚೀಟಿ, ವಿಮಾ ಸೌಲಭ್ಯ, ಮಾನವ ಹಕ್ಕು ಇವುಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದೆ, ಮೂಲ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಪ್ರತೀ ತಿಂಗಳು ಕೂಲಿಯಾಳುಗಳಿಗೆ ನೀಡುವಂತೆ ಗುತ್ತಿಗೆದಾರರ ಮೇಲ್ವಿಚಾರಕರು ಒಂದಷ್ಟು ಮೊತ್ತದ ವೇತನ ನೀಡುತ್ತಾರೆ. ತಿಂಗಳಿಗೊಂದು ರಜೆ, ಅವರು ಹೇಳುವ ಯಾವುದೇ ಕೆಲಸಕ್ಕೂ ನಾವು ಇಲ್ಲ ಎನ್ನುವಂತಿಲ್ಲ. ಆದರೆ ಇದೇ ಪ್ರಥಮ ಬಾರಿಗೆ ನಮಗೆ ಎಲ್ಲರಂತೆ ಸಮಾನವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಕತ್ತಲೆ ಲೋಕದಿಂದ ಹೊರಜಗತ್ತಿಗೆ ಬಂದಂತಹ ಹೊಸ ಅನುಭವವಾಗಿದೆ ಎನ್ನುತ್ತಾರೆ ಕಾರ್ಮಿಕರು.
ಕಳೆದ 43 ವರ್ಷಗಳ ಅವಧಿಯಲ್ಲಿ ಉಂಟಾದ ಕೆಲವೊಂದು ‘ರಾಜಕೀಯ ಅಸ್ಥಿರತೆ’ಯಿಂದಾಗಿ ಸುಮಾರು 10 ಮಂದಿ ಆಡಳಿತಾಧಿಕಾರಿ ಮತ್ತು ಇಬ್ಬರು ಕಾರ್ಯನಿರ್ವಹಣಾಧಿಕಾರಿ ಆಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದರೂ ಜೀತದಾಳುಗಳಂತಿದ್ದ ಈ ಪೌರ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಯಾರೂ ಪ್ರಯತ್ನಿಸಿಲ್ಲ ಎಂಬುದು ವಿಪರ್ಯಾಸವೇ ಸರಿ ಎಂದು ಸಕಾಲಿಕವಾಗಿ ತೆರಿಗೆ ಪಾವತಿಸುತ್ತಿರುವ ಇಲ್ಲಿನ ನಾಗರಿಕರು ಅಭಿಪ್ರಾಯ ಪಟ್ಟರು.

pursabhe spl (2)

ಮಾಜಿ ಪುರಸಭಾ ಸದಸ್ಯ ಬಿ.ದೇವದಾಸ ಶೆಟ್ಟಿ ಮಾತನಾಡಿ, ಈ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಪುರಸಭಾ ವ್ಯಾಪ್ತಿಯ ಕಸ ಮತ್ತು ತ್ಯಾಜ್ಯ ವಿಲೇವಾರಿಗೆ ಮಂಗಳೂರಿನ ಶರತ್ ಶೆಟ್ಟಿ ಎಂಬವರಿಗೆ ಮಾಸಿಕ ರೂ 1.60 ಲಕ್ಷ ಮೊತ್ತಕ್ಕೆ ಗುತ್ತಿಗೆ ವಹಿಸಿ ಕೊಡಲಾಗಿತ್ತು. ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಂಗಳೂರಿನ ಎಮ್ಮೆಕೆರೆ ಸಲಾಂ ಎಂಬವರಿಗೆ ಮಾಸಿಕ ರೂ 6ಲಕ್ಷ ಮೊತ್ತಕ್ಕೆ ಗುತ್ತಿಗೆ ನೀಡಿ ಬಳಿಕ ಹೆಚ್ಚುವರಿಯಾಗಿ ಪುರಸಭೆ ವತಿಯಿಂದಲೇ ಮೂರು ಮಿನಿ ಟಿಪ್ಪರ್ ಮತ್ತಿತರ ವಾಹನ ಒದಗಿಸಲಾಗಿದ್ದರೂ ಇನ್ನೂ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ತಿಳಿಸಿದರು.

ಪ್ರತೀ ಪೌರ ಕಾರ್ಮಿಕರಿಗೆ ಕಳೆದ 2011ರಿಂದ ಬ್ಯಾಂಕ್ ಖಾತೆ ಮೂಲಕ ನೇರವಾಗಿ ವೇತನ ಪಾವತಿಗೊಳಿಸಬೇಕು ಎಂದು ಸ್ವತಃ ಸರ್ಕಾರವೇ ಆದೇಶಿಸಿದೆ. ಕಳೆದ 2016ರ ಆ.4ರಂದು ಮತ್ತೆ ಕನಿಷ್ಟ ವೇತನ ರೂ 13,800 ನೀಡಬೇಕು. ವಾರಕ್ಕೊಂದು ರಜೆ ಸಹಿತ ಪಿಎಫ್ ಮತ್ತು ಇಎಸ್‍ಐ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದ್ದರೂ ಇಲ್ಲಿ ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಮತ್ತು ಉಡುಪಿ ಜಿಲ್ಲೆಯ 4 ಸ್ಥಳೀಯ ಸಂಸ್ಥೆಗಳ ಪೈಕಿ ಬಹುತೇಕ ಕಡೆಗಲ್ಲಿ ಕಳೆದ 2015ರಿಂದಲೇ ಬ್ಯಾಂಕ್ ಮೂಲಕ ಪೌರ ಕಾರ್ಮಿಕರಿಗೆ ವೇತನ ನೇರ ಪಾವತಿಯಾಗುತ್ತಿದೆ. ಇಲ್ಲಿನ ಪೌರ ಕಾರ್ಮಿಕರಿಗೆ ಮಾತ್ರ ಪ್ರತೀ ವರ್ಷ ಕಾರ್ಮಿಕ ದಿನಾಚರಣೆ ‘ಕರಾಳ ದಿನಾಚರಣೆ’ಯಾಗಿದೆ. ಇನ್ನು ಕಳೆದ ಮಾರ್ಚ್ ತಿಂಗಳಿನಿಂದ ಗುತ್ತಿಗೆ ವಹಿಸಿಕೊಳ್ಳುವ ಪದ್ಧತಿಗೆ ಸರ್ಕಾರವೇ ತಿಲಾಂಜಲಿ ಇಟ್ಟು ಪುರಸಭೆ ವತಿಯಿಂದಲೇ ಕಾರ್ಮಿಕರನ್ನು ನೇರ ನೇಮಕಾತಿಗೊಳಿಸಲು ಸೂಚಿಸಿದೆ. ಇದರಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಇವರಿಗೆ ವೇತನವೂ ಸಿಕ್ಕಿಲ್ಲ. ಇವರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವುದಾಗಿ ಹಾಲಿ ಮುಖ್ಯಾಧಿಕಾರಿ ಭರವಸೆ ನೀಡಿದ್ದಾರೆ. ಆ ಮೂಲಕ ಪೌರ ಕಾರ್ಮಿಕರ ದಿನಾಚರಣೆಗೆ ಹೊಸ ಅರ್ಥ ಸಿಗುತ್ತದೆ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಸಂಶೋಧಕ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.

pursabhe spl (3)

ಈ ಹಿಂದೆ ಇಲ್ಲಿನ ಸರ್ಕಾರಿ ಸಿಬ್ಬಂದಿ, ಗುತ್ತಿಗೆ ಆಧಾರಿತ ಸಿಬ್ಬಂದಿ, ಪೌರ ಕಾರ್ಮಿಕರ ನಡುವೆ ಅಂತರ ಕಂಡು ಬಂದಿದ್ದು, ಇದನ್ನು ನಿವಾರಿಸಿ ಎಲ್ಲರೂ ಒಟ್ಟಾಗಿ ಸೇರಿ ಪರಸ್ಪರ ಸುಖ-ಕಷ್ಟ ಹಂಚಿಕೊಳ್ಳಲು ಅನುಕೂಲವಾಗುವಂತೆ ಇದೇ ಪ್ರಥಮ ಬಾರಿಗೆ ‘ಪೌರ ಕಾರ್ಮಿಕರ ದಿನಾಚರಣೆ’ ಪ್ರಯುಕ್ತ ‘ಕ್ರೀಡಾಕೂಟ’ ಆಯೋಜಿಸಲಾಗಿದೆ. ಖಾಯಂ ನೌಕರರು ಮತ್ತು ಅಧಿಕಾರಿಗಳು ಇದರ ಖರ್ಚು ವೆಚ್ಛಗಳ ಜವಾಬ್ದಾರಿ ವಹಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಬ್ಯಾಂಕ್ ಖಾತೆ ತೆರೆದು ಸರ್ಕಾರದ ಆದೇಶದಂತೆ ಕನಿಷ್ಟ ವೇತನ ನೀಡಲು ಪ್ರಯತ್ನಿಸುವುದಾಗಿ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *