ಮೂಡುಬಿದಿರೆ: ಯಕ್ಷಗಾನದಿಂದ ಜನರಿಗೆ ಅನುಕೂಲವಾದ ವಿಚಾರ ಸಿಗುತ್ತಿದ್ದು, ಪಂಡಿತರ ವಿಮರ್ಶೆಯಿಂದ ಪುಸ್ತಕದಿಂದ ಹೊರತಾದ ಮಾಹಿತಿಗಳು ಬದುಕನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಉಪಕಾರಿಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಮನುಕುಲಕ್ಕೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ತಿಳಿಸಿದರು.
ಇಲ್ಲಿನ ಸ್ಕೈ ಪೈಂಟ್ ಮೂಡುಬಿದಿರೆ ವತಿಯಿಂದ ನಡೆದ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿ ಮಾತನಾಡಿ, ಉದ್ಯಮವನ್ನು ಪ್ರಾರಂಭಿಸುವುದು ಮುಖ್ಯವಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ಉತ್ಪನ್ನದ ಗುಣಮಟ್ಟ ಕಾಯ್ದಿರಿಸಿಕೊಳ್ಳುವ ಜೊತೆಗೆ ಹೋರಾಡುವುದು ಮುಖ್ಯ. ಉದ್ಯಮದ ಜೊತೆಗೆ ಕಲಾಪೋಷಣೆ ಮಾಡುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ವೇಳೆಯಲ್ಲಿ ಕಲಾವಿದ ದಾಮೋದರ ಸಪಳಿಗ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ. ಅಮರನಾಥಶೆಟ್ಟಿ, ಕೆ. ಅಭಯಚಂದ್ರ ಜೈನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಯಮಿ ಶೈಲೇಂದ್ರ ಕುಮಾರ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.
ಆ ಬಳಿಕ ಪಾದುಕಾ ಪ್ರದಾನ, ಭೀಷ್ಮವಿಜಯ, ಮತ್ತು ಕೃಷ್ಣ ಸಂಧಾನದ ತಾಳಮದ್ದಲೆ ನಡೆಯಿತು.
