ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ಇಲ್ಲಿನ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಇವರು ಆಂಧ್ರಪ್ರದೇಶದ ಕಥಕ್‍ನಲ್ಲಿ ಇದೇ 14ರಿಂದ 15ರತನಕ ನಡೆದ 34ನೇ ರಾಷ್ಟ್ರಮಟ್ಟದ ಜೂನಿಯರ್ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗೆದ್ದು ‘ಬೆಳ್ಳಿ ಪದಕ’ ಗಳಿಸಿದ್ದಾರೆ. ಈಕೆ ಇಲ್ಲಿನ ಸಂಗಬೆಟ್ಟು ನಿವಾಸಿ ರವೀಂದ್ರ ಜೈನ್ ಮತ್ತು ಪದ್ಮಶ್ರೀ ದಂಪತಿ ಪುತ್ರಿ. ಈ ಹಿಂದೆ ಮೂಡುಬಿದ್ರೆ ಸ್ವರಾಜ್ಯ ಮೈದಾನದಲ್ಲಿ ನಡೆದಿದ್ದ 34ನೇ ರಾಜ್ಯ ಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಗುಂಡು ಎಸೆತದಲ್ಲಿ ಕೂಡಾ ಬೆಳ್ಳಿಪದಕ ಗಳಿಸಿದ್ದರು.
ಇವರು ಮಂಗಳವಾರ ಸಿದ್ಧಕಟ್ಟೆಗೆ ಬರುತ್ತಿದ್ದಂತೆಯೇ ಇಲ್ಲಿನ ಸಂಗಬೆಟ್ಟು, ಕರ್ಪೆ, ಸಿದ್ಧಕಟ್ಟೆ ಮತ್ತಿತರ ಕಡೆಗಳಿಂದ ನಾಗರಿಕರು ಆಗಮಿಸಿ ಅಭಿನಂದಿಸಿ ಶಾಲೆಗೆ ಮೆರವಣಿಗೆಯಲ್ಲಿ ಕರೆ ತಂದರು. ಶಾಲಾ ಸಂಚಾಲಕ ವಿಜಯ ಕುಮಾರ್ ಚೌಟ, ಮುಖ್ಯ ಶಿಕ್ಷಕಿ ಸಬಿತಾ ಲವೀನಾ ಪಿಂಟೊ, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್, ಜಯಂತ್, ಪ್ರಾಂಶುಪಾಲ ಸಂತೋಷ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಸದಸ್ಯ ಮಾಧವ ಶೆಟ್ಟಿಗಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು, ಕ್ರೀಡಾಪಟು ಜಯ ನಾಯ್ಕ, ಡಾ. ಪ್ರಭಾಚಂದ್ರ ಜೈನ್, ಡಾ. ಸುದೀಪ್ ಕುಮಾರ್, ಉದ್ಯಮಿ ಪ್ರಶಾಂತ್ ಶೆಟ್ಟಿ, ಭರತ್ ಜೈನ್ ಮತ್ತಿತರರು ಇದ್ದರು
