ಸುಂಕದಕಟ್ಟೆ : ರಕ್ತದಾನ ಸಮಾಜದ ನೋವು ನಿವಾರಿಸುವ ಕೆಲಸ. ಒಬ್ಬರ ರಕ್ತದಾನದಿಂದ ನಾಲ್ಕು ಜೀವಗಳ ಉಳಿಸಲು ಸಾಧ್ಯವಿದೆ. ಇದು ಜನಸಮೂಹದೊಂದಿಗೆ ಸಂಬಂಧ ವೃದ್ಧಿಸುವ ಕೆಲಸವೂ ಆಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಶರತ್ ಅಭಿಪ್ರಾಯಪಟ್ಟರು.
ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೆ. 15ರಂದು ಆಯೋಜಿಸಲಾಗಿದ್ದ `ಸ್ವಯಂಪ್ರೇರಿತ ರಕ್ತದಾನ ಶಿಬಿರ’ದಲ್ಲಿ ಮಾತನಾಡುತ್ತಿದ್ದ ಅವರು, ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯುಳ್ಳ ರಕ್ತದಾನದ ಮಹತ್ವ ಅರಿತು, ರಕ್ತದಾನದಲ್ಲಿ ಸಕ್ರಿಯರಾಗಬೇಕು. ಇದೊಂದು ಸಮಾಜಸೇವೆಯಾಗಿದ್ದು, ಇದಕ್ಕೆ ದೇವರ ಪೂಜೆಗಿಂತಲೂ ಮಿಗಿಲಾದ ಸ್ಥಾನವಿದೆ ಎಂದರು.
ಶ್ರೀ ನಿರಂಜನಸ್ವಾಮಿ ಪ್ರಥಮ ದರ್ಜೆ ಕಾಲೇಜು(ಸುಂಕದಕಟ್ಟೆ), ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಕಾಲೇಜು ಅಭಿವೃದ್ಧಿ ಸಮಿತಿ, ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾ ಸಂಘ(ಸುಂಕದಕಟ್ಟೆ, ಬಜ್ಪೆ), ಶ್ರೀ ನಿರಂಜನ ಸ್ವಾಮಿ ಅನುದಾನಿತ ತಾಂತ್ರಿಕ ವಿದ್ಯಾಲಯ(ಸುಂಕದಕಟ್ಟೆ), ರೋಟರಿ ಕ್ಲಬ್ ಬಜ್ಪೆ, ಯುವ ವಾಹಿನಿ ಘಟಕ(ಬಜ್ಪೆ), ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಲತಾ ಕೆ ಮಾತನಾಡುತ್ತ, ರಕ್ತದಾನದಲ್ಲಿ ವಿದ್ಯಾರ್ಥಿಗಳ ಸಹಿತ ಯುವಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ಇದೊಂದು ಸಮಾಜಮುಖಿ ಸೇವೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಹಳೆ ವಿದ್ಯಾರ್ಥಿಗಳು ಈ ಸೇವೆಯಲ್ಲಿ ಸದಾ ಮುಂದಿದಿದ್ದಾರೆ ಎಂದರು.
ನಾರಾಯಣ ಎನ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮದಲ್ಲಿ ದೇವರಾಜ ಅಮೀನ್(ಯುವವಾಹಿನಿ ಬಜ್ಪೆ), ಫ್ರಾಂಕ್ಲಿನ್ ರೇಗೊ(ರೋಟರಿ), ಸುಂಕದಕಟ್ಟೆ ತಾಂತ್ರಿಕ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಗುರುದೇವ್ ಇದ್ದರು. ಕುಮಾರಿ ಸ್ವಪ್ನಾ ಕಾರ್ಯಕ್ರಮ ನಿರೂಪಿಸಿದರು. ಕಮಲಾಕ್ಷಿ ವಂದಿಸಿದರು. ರಕ್ತದಾನ ಶಿಬಿರಕ್ಕೆ ಶಾಲಿನಿ, ಗಣೇಶ ಮಂಜೇಶ್ವರ, ವಿಶ್ವನಾಥ ಪೂಜಾರಿ ರೆಂಜಾಳ, ಸಂಧ್ಯಾ, ಗೋಪಾಲಕೃಷ್ಣ ಮೊದಲಾದವರು ಸಹಕರಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.
