ಹೈದರಾಬಾದ್: ‘ವಿಜಯವಾಡ’ ಬಳಿ ಆಂಧ್ರದ ನೂತನ ರಾಜಧಾನಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಹೇಳಿದ್ದಾರೆ. ಇಂದು ಆಂಧ್ರ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು, ಬೆಳಗ್ಗೆ ಸುಮಾರು 11.16ಕ್ಕೆ ಸರಿಯಾಗಿ ಎದ್ದುನಿಂತ್ತು ಆಂಧ್ರದ ನೂತನ ರಾಜಧಾನಿಯನ್ನು ವಿಜಯವಾಡ ಬಳಿ ನಿರ್ಮಿಸಲಾಗುವುದು ಎಂದು ಅಧಿಕೃತ ಘೋಷಣೆ ಮಾಡಿದರು. ಆಂಧ್ರದ ನೂತನ ರಾಜಧಾನಿ ಹೆಸರನ್ನು ಘೋಷಿಸುತ್ತಿದ್ದಂತೆ ಇದಕ್ಕೆ ಆಂಧ್ರದ ವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ನಾಯ್ಡು ಸರ್ಕಾರ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದೆ. ನೂತನ ರಾಜಧಾನಿಗೆ ಸಂಬಂಧಿಸಿದಂತೆ ವಿಪಕ್ಷಗಳೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸದೆ ಸಲಹೆ ಸೂಚನೆಗಳು ಹಾಗೂ ಅಭಿಪ್ರಾಯಗಳನ್ನು ಪಡೆಯದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದು, ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದರು. ನೂತನ ರಾಜಧಾನಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾತನಾಡಿದ ಚಂದ್ರಬಾಬು ನಾಯ್ಡು, ಸೆಪ್ಟೆಂಬರ್ 1ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ರಾಜಧಾನಿ ನಿರ್ಮಿಸುವ ಕುರಿತು ಚರ್ಚೆ ನಡೆಸಿ ತೀರ್ಮಾನಕೈಗೊಳ್ಳಲಾಗಿತ್ತು. ಹೀಗಾಗಿ ಇಲ್ಲಿ ಯಾರನ್ನು ಅಲಕ್ಷೀಸಿಲ್ಲ ಎಂದರು. ಅಲ್ಲದೆ ಆಂಧ್ರದ ಎಲ್ಲಾ ಪ್ರಾಂತ್ಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ನೀಡಿದ ಅವರು, ಆಂಧ್ರದಲ್ಲಿ 3 ಮೆಗಾ ಸಿಟಿ ಹಾಗೂ 14 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದರು. ಆಂಧ್ರಪ್ರದೇಶ ವಿಭಜನೆಗೊಂಡ ನಂತರ ಆಂಧ್ರದ ನೂತನ ರಾಜಧಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶಿವರಾಮಕೃಷ್ಣನ್ ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. ಅದರಂತೆ ಸಮಿತಿಯು ವಿಜಯವಾಡ ಹಾಗೂ ಗುಂಟೂರನ್ನು ರಾಜಧಾನಿ ಮಾಡುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇಂತಹ ವಿರೋಧದ ನಡುವೆಯೂ ಇಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ವಿಜಯವಾಡವನ್ನು ಆಂಧ್ರದ ನೂತನ ರಾಜಧಾನಿ ಎಂದು ಘೋಷಿಸಿದ್ದಾರೆ.

