Published On: Mon, Sep 3rd, 2018

ಚಾತುರ್ಮಾಸ ಪ್ರಯುಕ್ತ ಶ್ರೀ ಸಂಪುಟ ನರಸಿಂಹ ಮಠದಲ್ಲಿ ಸುಧರ್ಮ ಸಭೆ

ಸುಬ್ರಹ್ಮಣ್ಯ: ಋಷಿಮುನಿಗಳ ತಪಸ್ಸು ಹಾಗೂ ಮಠ ಮಂದಿರಗಳಿಂದ ಹಿಂದುತ್ವ ಉಳಿದಿದೆ. ಹಿಂದೂ ಧರ್ಮ ಉಳಿವಿನಲ್ಲಿ ಮಠಗಳ ಪಾತ್ರ ಮಹತ್ತರವಾದ್ದು. ದೇವಸ್ಥಾನ ಮತ್ತು ಮಠ ಎರಡಕ್ಕೂ ಹಿಂದುತ್ವವೇ ಆಧಾರ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ 22 ನೇ ಚಾತುರ್ಮಾಸದ ಪ್ರಯುಕ್ತ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದಲ್ಲಿ ನಡೆದ ಸುಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಶ್ರದ್ಧಾ ಕೇಂದ್ರಗಳಲ್ಲಿ ತಪ್ಪುಗಳು ನಡೆಯುವುದು ಸಹಜ. ಅದು ಬೀದಿಯಲ್ಲಿ ಚರ್ಚೆಯಾಗಬಾರದು. ವಿಚಾರವನ್ನು ಸಂಘರ್ಷವಾಗಿ ಪರಿವರ್ತಿಸಿ ಬೀದಿಗಳಲ್ಲಿ ಮಾತನಾಡುವ ಮಟ್ಟಕ್ಕೆ ಹಿಂದುಗಳಾದ ನಾವು ಇಳಿಯಬಾರದು. ಇದು ಹಿಂದೂ ಸಮಾಜದ ಪತನಕ್ಕೆ ದಾರಿಯಾಗುತ್ತದೆ. ಆಳವಾಗಿ ಚಿಂತನೆಗಳು ಈ ವಿಚಾರದಲ್ಲಿ ನಡೆಯಬೇಕು. ಹಿಂದೂ ಶ್ರದ್ಧಾ ಕೇಂದ್ರಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಿದರೆ ಅವರ ವಿರುದ್ಧ ನಮ್ಮ ಸಂಘಟನೆ ನಿಂತು ಧರ್ಮ ರಕ್ಷಣೆ ಮಾಡುತ್ತದೆ. ಇಲ್ಲಿನ ಮಠ ಹಾಗೂ ಯತಿಗಳ ರಕ್ಷಣೆ ವಿಚಾರದಲ್ಲೂ ನಮ್ಮ ಸಂಘಟನೆ ರಕ್ಷಣೆಗೆ ಇರುತ್ತದೆ ಎಂದರು.

sudharma sabhe
ಎಲ್ಲವೂ ವಿಜ್ಞಾನದಿಂದಲೇ ನಡೆಯುತ್ತದೆ ಎನ್ನುವವರಿಗೆ, ವಿಜ್ಞಾನ ಎಷ್ಟೆ ಮುಂದುವರೆದರೂ ಕೊನೆಗೆ ದೇವರ ನೆನಪಾಗುತ್ತದೆ. ಆಧ್ಯಾತ್ಮ, ಧರ್ಮ, ಸಂಪ್ರದಾಯ ಬಿಟ್ಟು ಬದುಕಿಲ್ಲ. ಹಿಂದೂತ್ವ ವiತ್ತು ನಂಬಿಕೆ ಹಾಳು ಮಾಡಲು ಸಂವಿಧಾನದಲ್ಲಿ ಯಾರಿಗೂ ಹಕ್ಕು ನೀಡಿಲ್ಲ. ಅಧಿಕಾರಕ್ಕೆ ಬರುವ ತನಕ ಧರ್ಮ ದೇವರ ಹೆಸರು ಹೇಳಿ ಬಳಿಕ ಮರೆಯುವ ಮನಃಸ್ಥಿತಿಯಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ. ಮುಂದಿನ ಲೋಕಸಭಾ ಚುನಾವಣೆ ಮುಂಚಿತ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗ ಬೇಕು ಎಂದವರು ಆಗ್ರಹಿಸಿದರು.
ದೇವಸ್ಥಾನ ಕಟ್ಟಲು ಕೋಟಿ ವೆಚ್ಚ, ದೇವರ ಪ್ರತಿಷ್ಠಾಪನೆಗೆ ಲಕ್ಷಲಕ್ಷ ಖರ್ಚು ಮಾಡುತ್ತೇವೆ. ದೇವಸ್ಥಾನಗಳಿಗೆ ಅಘಾತವದಾಗ ದೇಗುಲದ ಉಳಿವಿಗೆ ಹೋರಾಟ ನಡೆಸುವ ಹಿಂದೂ ಕಾರ್ಯಕರ್ತರನ್ನು ಮಾತ್ರ ಜೈಲಿಗೆ ಅಟ್ಟುತ್ತೇವೆ. ಆಗ ಅವರ ರಕ್ಷಣೆಗೆಂದು ಯಾರು ಇರುವುದಿಲ್ಲ. ಇದೆಲ್ಲವನ್ನು ಮೆಟ್ಟಿ ಇಂದಿಗೂ ಧರ್ಮ ರಕ್ಷಣೆಗೆ ಹಿಂದೂ ಕಾರ್ಯಕರ್ತರು ನಿಂತಿರುವುದು ಹಿಂದು ಧರ್ಮದ ಶ್ರೇಷ್ಠತೆ ಎಂದು ಹೇಳಿದರು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಆಶಿರ್ವಚನ ನೀಡಿ ಮಾತನಾಡಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ 800 ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಆದರೆ ಕೆಲವರು ಇದನ್ನು 130 ವರ್ಷಗಳದೆಂದು ಬಿಂಬಿಸುತ್ತಿದ್ದಾರೆ. ಮಠದ ಈಗಿನ ಸ್ಥಳದಲ್ಲಿ ಮಠ ಇರಲಿಲ್ಲ ಇತ್ಯಾದಿ ಆರೋಪಗಳಲ್ಲಿ ತೊಡಗಿ ಮಠ ಹಾಗೂ ಪೀಠಾಧೀಶರ ಕುರಿತು ನಿರಾಧಾರ ಹೇಳಿಕೆ ನೀಡುತ್ತಿರುವುದರಿಂದ ಮಠದ ಲಕ್ಷಾಂತರ ಭಕ್ತ ಸಮೂಹಕ್ಕೆ ನೋವುಂಟಾಗಿದೆ. ಸತ್ಯಾಂಶವಿಲ್ಲದ ಆಧಾರರಹಿತ ಆರೋಪಗಳು ಸನಾತನ ಧರ್ಮದ ನಂಬಿಕೆಗೆ ಬಗೆದ ದ್ರೋಹವಾಗಿದೆ. ಕೆಲವೇ ಮಂದಿಯ ಸಂತೋಷಕ್ಕಾಗಿ ಮಠದ ಕುರಿತು ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ. ಮಠವು ಅಪಾರ ಭಕ್ತ ಸಮೂಹ ಹೊಂದಿದ್ದು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದೆ. ಕಠಿನ ವೃತ ಹಾಗೂ ಅಪರಿಮಿತ ಶ್ರಮದ ಮೂಲಕ ಮಠವು ಇಂದು ಅಪಾರ ಪ್ರಮಾಣದ ಭಕ್ತರನ್ನು ಹೊಂದಿದೆ. ಮಠದ ಮೇಲಿನ ಸುಳ್ಳು ಆರೋಪಗಳ ಮೂಲಕ ಮಠದ ಭಕ್ತರನ್ನು ಅಪಮಾನಿಸಲಾಗಿದೆ. ಆರೋಪ ಹೊರಿಸುವವರಿಗೆ ನಡವಳಿಕೆಗಳನ್ನು ತಿದ್ದಿಕೊಳ್ಳುವ ಮನಸ್ಸನ್ನು ಭಗವಂತ ಅನುಗ್ರಹಿಸಲಿ ಎಂದರು.
ಈ ಸಂದರ್ಭದಲ್ಲಿ ಮಠದ ದಿವಾನರಾದ ಸುದರ್ಶನ ಜೋಯಿಸ ಹಾಗೂ ಅಪಾರ ಪ್ರಮಾಣದ ಭಕ್ತರು ಉಪಸ್ಥಿತರಿದ್ದರು. ಶ್ಯಾಂ ಸುದರ್ಶನ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter