ಮಂಗಳೂರು: “ವಾಜಪೇಯಿ ಓರ್ವ ಅಪ್ರತಿಮ ನಾಯಕ, ಸಮರ್ಥ ಸಂಘಟಕ, ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮುನ್ನೆಡೆಸುವವ ಹೇಗಿರಬೇಕೆಂಬುದಕ್ಕೆ ಒಂದು ಮಾದರಿ. ಅಸ್ಖಲಿತವಾಗ್ಮಿ, ಮಗುಮನ ಕವಿಹೃದಯದ ನಿಷ್ಠುರವಾದಿ” ಎಂಬುದಾಗಿ ವಿಧಾನಪರಿಷತ್ ಮಾಜೀ ಸದಸ್ಯ ಬಿ.ಜೆ.ಪಿ. ನೇತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು. ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಅಟಲ್ಜೀ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಟಲ್ಜೀಯವರನ್ನು ಭೇಟಿ ಮಾಡಿದ ತನ್ನ ಜೀವನದ ಅಪೂರ್ವ ಕ್ಷಣಗಳನ್ನು ಅವರು ಭಾವಪೂರ್ವಕವಾಗಿ ಸ್ಮರಿಸಿಕೊಂಡರು.
ಕ್ಯಾಂಪ್ಕೊ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ, ಅಟಲ್ಜೀಯವರು ತಮ್ಮನ್ನು ಸಮಾಜದ ಸೇವಕ, ಸಮಾಜದ ಆಸ್ತಿ ಎಂಬುದಾಗಿ ತಿಳಿದು ಸಂಪೂರ್ಣವಾಗಿ ದೇಶ ಸೇವೆಗೆ ಅರ್ಪಿಸಿಕೊಂಡು ಸಮಗ್ರವಾಗಿ ಭಾರತವನ್ನು ಪ್ರಕಾಶಿಸುವ ಕನಸು ಕಂಡವರು. ಬಿ.ಜೆ.ಪಿ.ಯನ್ನು ಕಟ್ಟಿ ಬೆಳೆಸಿದವರು ರಾಜಕಾರಣಿಗಳಿಗೆ ಮಾದರಿಯಾಗಿ ನುರಿತ ಮುತ್ಸದ್ಧಿಯಾಗಿ ಮಾನವತಾವಾದಿಯಾಗಿ ಬಾಳಿಬೆಳೆಗಿದ ಅಪರೂಪದ ಜನ ನಾಯಕ; ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ವ್ಯಕ್ತಿತ್ವಗಳಿಂದ ಪ್ರಭಾವಿತರಾದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸಮಸ್ತ ಕ್ಯಾಂಪ್ಕೊ ಬಳಗದ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಾ, ವಾಜಪೇಯಿಯವರು ಅರ್ಪಣಾ ಮನೋಭಾವದಿಂದ ದೇಶಕಟ್ಟುವ ಕಾರ್ಯಮಾಡಿದ್ದಾರೆ. ರಾಜಧರ್ಮವನ್ನು ಪಾಲಿಸಿದ ಶ್ರೇಷ್ಠ ಆಡಳಿತಗಾರರಾಗಿ ಆದರ್ಶಪ್ರಾಯರಾಗಿ ನಮ್ಮ ಮುಂದಿದ್ದಾರೆ. ಅವರ ಸಂಘಟನಾ ಚಾತುರ್ಯದ ಫಲರೂಪವಾಗಿ ಭಾರತಕ್ಕಿಂದು ವಿಶ್ವ ಮಾನ್ಯತೆ ದೊರಕುತ್ತಿದೆ; ಜೈ ಜವಾನ್, ಜೈ ಕಿಸಾನ್ ಜೊತೆಗೆ ಜೈ ವಿಜ್ಞಾನ್ ಎಂಬ ಅವರ ಘೋಷವಾಕ್ಯಗಳು ಅವರ ದೂರದೂಷ್ಟಿ ಹಾಗೂ ಸಮ್ಯಕ್ ಜ್ಞಾನವನ್ನು ಸಾರುತ್ತಿವೆ ಎಂದರು.
ಕ್ಯಾಂಪ್ಕೊ ನೌಕರ ವೃಂದದಿಂದ ರೇಶ್ಮಾ ಮಲ್ಯ, ಉದಯ ಕುಮಾರ್ ರೈ, ಟಿ.ಎಸ್.ಭಟ್, ಪ್ರಸಾದ್ ಕೆ.ಎಸ್., ಶಿವರಾಮ ಪಿ., ಹಾಗೂ ಕಿಶನ್ ಪಿ. ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮೌನ ಪ್ರಾರ್ಥನೆ ಹಾಗೂ ಶಾಂತಿಮಂತ್ರವನ್ನು ಪಠಿಸಲಾಯಿತು. ಕ್ಯಾಂಪ್ಕೊದ ವಿವಿಧ ಶಾಖೆಗಳಲ್ಲಿ ಆಗಲಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

