ಮಂಗಳೂರು: ಮುಂಬಯಿಯ ಅಜೆಕಾರು ಕಲಾಭಿಮಾನಿ ಬಳಗವು ವರ್ಷಂಪ್ರತಿ ನಡೆಸುವ ತಾಳಮದ್ದಳೆ ಸರಣಿಯ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವ ಯಕ್ಷರಕ್ಷಾ ಪ್ರಶಸ್ತಿಗೆ 2017-18 ನೇ ಸಾಲಿನಲ್ಲಿ ಖ್ಯಾತ ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂ.50,000/- ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

yaksha raksha award

ಪುತ್ತೂರು ತಾಲೂಕು ಇರ್ದೆ ಗ್ರಾಮದ ಪ್ರತಿಷ್ಠಿತ ಬಾಲ್ಯೊಟ್ಟುಗುತ್ತು ಮನೆತನದ ಭಾಸ್ಕರ ರೈ ಕುಕ್ಕುವಳ್ಳಿ ದಿಟಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ಕೆ .ರೈ ದಂಪತಿಯ ಸುಪುತ್ರ. ಇವರು ಎಂ.ಎ, ಎಂ.ಎಡ್.ಪದವೀಧರರು. ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ಇಲಾಖೆಯಲ್ಲಿ 14 ವರ್ಷ ದುಡಿದು, ಬಳಿಕ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯನ್ನು ಸೇರಿ ಚೇಳಾಯರು ಮತ್ತು ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವರು.ಬಾನುಲಿ ಪಠ್ಯ ಮತ್ತು ತುಳು ಪಠ್ಯ ರಚನಾ ಸಮಿತಿ ಸದಸ್ಯರಾಗಿ,ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಅವರು ಖ್ಯಾತರು.ಕನ್ನಡ ಸಂಘ,ತುಳು ಕೂಟ,ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ,ಕರ್ನಾಟಕ ಯಕ್ಷ ಭಾರತಿ ಪುತ್ತೂರು, ಯಕ್ಷಾಂಗಣ ಮಂಗಳೂರು, ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮುಂತಾದ ಸಂಘಟಣೆ ಗಳಲ್ಲಿ ಸಕ್ರಿಯರು.

ಶೇಣಿ,ಸಾಮಗ,ಪೆರ್ಲ, ಕಾಂತ ರೈ,ತೆಕ್ಕಟ್ಟೆ ಮೊದಲಾದ ಹಳೆ ತಲೆಮಾರಿನ ದಿಗ್ಗಜ ಕಲಾವಿದರೊಂದಿಗೆ ಭರವಸೆಯ ಯುವ ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರದಲ್ಲಿ ಕಾಣಿಸಿಕೊಂಡ ಕುಕ್ಕುವಳ್ಳಿಯವರು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ನೂರಾರು ಕಾರ್ಯಕ್ರಮಗಳಲ್ಲಿ, ಯಕ್ಷಗಾನ ಸಪ್ತಾಹಗಳಲ್ಲಿ ಮತ್ತು ಧ್ವನಿಸುರುಳಿಗಳಲ್ಲಿ ಪ್ರಮುಖ ಕಲಾವಿದರಾಗಿ ವಿಭಿನ್ನ ಮನೋಧರ್ಮದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರೊಂದಿಗೆ ವೇಷಧಾರಿಯಾಗಿಯೂ ಗಮನಸೆಳೆದಿದ್ದಾರೆ. ಕನ್ನಡ,ತುಳು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲೂ ಯಕ್ಷಗಾನ ಆಟ ಕೂಟಗಳನ್ನು ನಡೆಸಿದ್ದಾರೆ. ಗೋಷ್ಠಿ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ಕನ್ನಡ ಮತ್ತು ತುಳು ಭಾಷೆಯಲ್ಲಿ ಕತೆ- ಕವಿತೆ ಲೇಖನ-ನಾಟಕ ವಿಮರ್ಶೆಗಳನ್ನು ಬರೆದಿರುವ ಭಾಸ್ಕರ ರೈ ಅವರು ಯಕ್ಷಿಕಾ,ಒಡ್ಡೋಲಗ,ಯಕ್ಷ ಬಂಟರು,ಪಂಚದುರ್ಗಾ, ಅಭಿರಾಮ, ನೆಯಿ-ಪೇರ್, ಯಕ್ಷರ ಚೆನ್ನ, ಪುಳಿಂಚ ಸ್ಮೃತಿ-ಕೃತಿ ಮುಂತಾದ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.ಘೋರ ಮಾರಕ, ಗುನ್ಯಾಸುರ ವಧೆ,ಕ್ರಾಂತಿ ಕಹಳೆ, ಸಾವಯವ ವಿಜಯ ಇತ್ಯಾದಿ ಜನ ಜಾಗೃತಿಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಆಕಾಶವಾಣಿ,ದೂರದರ್ಶನ ಮತ್ತು ಸ್ಥಳೀಯ ವಾಹಿನಿಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮ ನೀಡುತ್ತಿದ್ದಾರೆ.ದ್ವನಿ ಸುರುಳಿ ಮತ್ತು ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ.ನಮ್ಮ ಸಂಪರ್ಕ, ಮದಿಪು, ಸದಾಶಯ ಮಾಸಪತ್ರಿಕೆಗಳ ಸಂಪಾದಕರು. ಯಕ್ಷಗಾನ ಬಯಲಾಟ, ತಾಳಮದ್ದಳೆ, ಪುರಾಣ ಪ್ರವಚನ ಮತ್ತು ಉಪನ್ಯಾಸಗಳ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ. ದೆಹಲಿ,ಬೆಂಗಳೂರು, ಮುಂಬಯಿ,ಅಬುದಾಬಿ,ಶಾರ್ಜಾ, ಮಸ್ಕತ್,ಕತಾರ್, ಬೆಹರಿನ್ ಗಳಲ್ಲಿ ಸನ್ಮಾನಿತರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ದುಡಿದಿದ್ದಾರೆ.
ಆರ್ಯಭಟ,ಜಿಲ್ಲಾ ರಾಜ್ಯೋತ್ಸವ, ಕಾರಂತ ಸದ್ಭಾವನ, ಸೌರಭ,ಸಾಧನಾ ನೂಪುರ,ಬಂಟ ವಿಭೂಷಣ,ವಿದ್ಯಾರತ್ನ,ತುಳುವೆರೆ ಆಯನೊ,ಪೆರ್ಮೆದ ತುಳುವೆ, ಶೇಣಿ ಶತಮಾನೋತ್ಸವ , ತುಳುನಾಡ ಜ್ಞಾನ ಸೂರ್ಯ-ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಆಗಸ್ಟ್11ರಿಂದ ಮುಂಬಯಿ ಮಹಾನಗರದ ವಿವಿಧೆಡೆ ಅಜೆಕಾರು ಕಲಾಭಿಮಾನಿ ಬಳಗ ಆಯೋಜಿಸಿರುವ 17 ನೇ ವರ್ಷದ ತಾಳಮದ್ದಳೆ ಸರಣಿಯ ಸಮಾರೋಪ ಸಮಾರಂಭ ಇದೇ ಆ.26 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಲಿದ್ದು, ಅದರಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ‘ಯಕ್ಷರಕ್ಷಾ ಪ್ರಶಸ್ತಿ- 2018’ ಪ್ರದಾನ ಮಾಡಲಾಗುವುದು ಎಂದು ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಯುವ ಮದ್ದಳೆಗಾರ ಪ್ರಶಾಂತ ಶೆಟ್ಟಿ ವಗೆನಾಡು , ಖ್ಯಾತ ಮಹಿಳಾ ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ ಹಾಗೂ ಮುಂಬಯಿಯ ಪ್ರಮುಖರಿಗೆ ಯಕ್ಷರಕ್ಷಾ ಕಲಾ ಗೌರವ ನೀಡಲಾಗುವುದು ಎಂದವರು ಪ್ರಕಟಿಸಿದ್ದಾರೆ.

By Suddi9

Leave a Reply

Your email address will not be published. Required fields are marked *