ಕೈಕಂಬ: ಮಕ್ಕಳ ಪ್ರತಿಭೆ ಹೊರಗೆಡಹುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಉತ್ತಮ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಲ್ಲಿ ಪೋಷಕರ ಉತ್ತೇಜನ ಅತಿ ಮುಖ್ಯ ಎಂದು ತಾ.ಪಂ ಸದಸ್ಯ ಸುನೀಲ್ ಹೇಳಿದರು. ಅವರು ಕಿನ್ನಿಕಂಬಳ ಎಕೆಯು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ಗಂಜಿಮಠ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾನೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕಿನ್ನಿಕಂಬಳ ಎಕೆಯು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 2ರಂದು ಗಂಜಿಮಠ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಳಲಿ, ಗಂಜಿಮಠ, ಕಿನ್ನಿಕಂಬಳ ಸಹಿತ ಒಟ್ಟು ಏಳು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿ ಮಾತಾಡಿದ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಪ್ರತಿಯೊಬ್ಬ ಮಕ್ಕಳಲ್ಲಿ ನಾನಾ ರೀತಿಯ ಪ್ರತಿಭೆಗಳಿರುತ್ತವೆ. ಅವುಗಳ ಅಭಿವ್ಯಕ್ತಿಗೆ ಇಂತಹ ವೇದಿಕೆ ಸಹಕಾರಿಯಾಗುತ್ತದೆ. ಪ್ರತಿಭಾ ಕಾರಂಜಿಯಲ್ಲಿ ಹೆಚ್ಚೆಚ್ಚು ಮಕ್ಕಳು ಪಾಲ್ಗೊಳ್ಳಬೇಕು ಎಂದು ಆಶಿಸಿದರು.
ಶಿಕ್ಷಣ ಇಲಾಖೆ ವತಿಯಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾವತಿ ಮಾತನಾಡುತ್ತ, ದೇಶದ ಉಜ್ವಲ ಭವಿಷ್ಯ ಮಕ್ಕಳ ಕಣ್ಣುಗಳಲ್ಲಿವೆ. ಪ್ರತಿಭೆಯು ಪ್ರಾಯೋಗಿಕವಾಗಿ ಹೊರಹೊಮ್ಮಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳು ಆದ್ಯತೆ ನೀಡಬೇಕು ಎಂದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಗ್ರೆಟ್ಟಾ ಪ್ರತಿಭಾ ಕಾರಂಜಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಉಮ್ಮರ್ ಸಾಹೇಬ್, ಪ್ರೌಢಶಾಲಾ ಆಡಳಿತ ಮಂಡಳಿ ಸದಸ್ಯ ಅಬ್ದುಲ್ ಶಕೂರ್, ಸಂಘದ ಉಪಾಧ್ಯಕ್ಷ ಸುರೇಶ್ ರಾವ್, ಇಲಾಖಾ ಸಂಪನ್ಮೂಲ ವ್ಯಕ್ತಿ ಲೈಲಾ ಕಿಶೋರಿ, ಶಿಕ್ಷಕರಾದ ಐರಿನ್ ಡಿ’ಸೋಜ, ಬಿಐಆರ್ಡಿನ ಸರಿತಾ, ಗಂಜಿಮಠ ಗ್ರಾಪಂ ಸದಸ್ಯೆ ದುಲ್ಸಿನ್ ಕ್ರಾಸ್ತ, ಕಾಲೇಜಿನ ಮುಖ್ಯ ಶಿಕ್ಷಕಿ ಪೂರ್ಣಿಮಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗಮ್ಮ ಮೊದಲಾದವರಿದ್ದರು. ಕಿನ್ನಿಕಂಬಳ ಎಕೆಯು ಶಾಲೆಯ ಮುಖ್ಯೋಪಾಧ್ಯಾಯ ಅರುಣ್ ಕುಮಾರ್ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕಿ ಶೀಲಾವತಿ ಪ್ರಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದ ಮಾಧವ ಮಯ್ಯ ವಂದಿಸಿದರು.
ಚಿತ್ರ2ವಿಪಿಪ್ರತಿಭಾಕಾರಂಜಿ
