ಗಂಜಿಮಠ:ಎಚ್‍ಪಿಸಿಎಲ್ ಪೈಪ್‍ಲೈನ್‍ನಲ್ಲಿ ಸರ್ವಿಸ್ ಗಾರ್ಡ್‍ಗಳಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಏಕಾಏಕಿ ಕೈಬಿಟ್ಟು, ಹೊಸಬರನ್ನು ನೇಮಿಸಲು ಎಚ್‍ಪಿಸಿಎಲ್ ಪೈಪ್‍ಲೈನಿನ ಸರ್ವಿಸ್ ಸ್ಟೇಷನ್‍ನಲ್ಲಿ ಮುಂದಾಗಿದೆ. ಇದರಿಂದ ಕಂಗಾಲಾದ ನೌಕರರು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಎಚ್‍ಪಿಸಿಎಲ್ ಸರ್ವಿಸ್ ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದರು. ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಿಐಎಸ್‍ಎಸ್ ಗುತ್ತಿಗಾರರ ಆಧಾರದಲ್ಲಿ ಐವತ್ತಕ್ಕೂ ಅಧಿಕ ಮಂದಿ ಸ್ಥಳೀಯರು ಸರ್ವಿಸ್ ಸ್ಟೇಷನ್‍ಗಳಲ್ಲಿ ಸಿಐಎಸ್‍ಎಸ್ ಗುತ್ತಿಗೆದಾರರ ಮಂಗಳೂರು, ಹಾಸನ, ಮೈಸೂರು, ಬೆಂಗಳೂರು ಹಾದು ಹೋಗಿರುವ ಎಚ್‍ಪಿಸಿಎಲ್ ಗ್ಯಾಸ್ ಪೈಪ್‍ಲೈನಿನಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಕೆಲಸ ಮಾಡಿದ್ದಾರೆ.
ಈ ಪೈಪ್‍ಲೈನಿಗೆ ಹಲವಾರು ಸ್ಥಳೀಯರು ಕಂಪೆನಿಗೆ ಬಿಟ್ಟುಕೊಟ್ಟಿದ್ದು, ಈ ಕಂಪೆನಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಇತ್ತೀಚೆಗೆ ಕಂಪೆನಿಯು ಕೇಂದ್ರ ಸರಕಾರದ ನಿರ್ಧಾರವೆಂದು ಹೇಳಿಕೊಂಡು ನಿಯೋಜಿತ ಕಾರ್ಮಿಕರನ್ನು ಕೈಬಿಟ್ಟು ಹೊಸತಾಗಿ ನೇಮಿಸಲು ಮುಂದಾಗಿರುವುದರಿಂದ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ನಿಯೋಜಿತ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆದ್ದರಿಂದ ನಿಯೋಜಿತ ಕಾರ್ಮಿಕರನ್ನು ಕೈಬಿಟ್ಟರೆ ಅವರ ಇಡೀ ಕುಟುಂಬವೇ ಬೀದಿಗೆ ಬಂದು ದಿನನಿತ್ಯದ ಜೀವನ ಕಷ್ಟವಾಗುತ್ತದೆ. ಆದ್ದರಿಂದ ನಿಯೋಜಿತ ಕಾರ್ಮಿಕರನ್ನು ಕೈಬಿಡದೆ ಅವರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಾರ್ಮಿಕರ ಪರವಾಗಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಪ್ರತಿಭಟನೆಗೆ ಸಾಥ್ ನೀಡಿದರು. ಈಗಾಗಲೇ ಇರುವ ನಿಯೋಜಿತ ಕಾರ್ಮಿಕರನ್ನು ಕೈಬಿಡದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಸಂಸದರ ಜೊತೆ ಮಾತುಕತೆ ನಡೆಸಿ ಈಗಿರುವ ಕಾರ್ಮಿಕರನ್ನು ಖಾಯಂ ಆಗಿ ಉಳಿಸಿಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕಿಂತ ಮೊದಲು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಆಗಮಿಸಿ, ಕಾರ್ಮಿಕರ ಹಾಗೂ ಸ್ಥಳೀಯರ ಜೊತೆ ಮಾತುಕತೆ ನಡೆಸಿ ಸಾಂತ್ವಾನ ನೀಡಿದ್ದಾರೆ. ಶಾಸಕ ಭರತ್ ಶೆಟ್ಟಿಯವರು ಕಂಪೆನಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಲ್ಲದೆ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಲಿದ್ದಾರೆ.
ವಿಹಿಂಪ ಮುಖಂಡ ಜಗದೀಶ್ ಶೇಣವ ಪ್ರತಿಭಟನೆಯಲ್ಲಿ ಭಾಗವಹಿಸಿ, ಯಾವುದೇ ಕಾರಣಕ್ಕೂ ನಿಯೋಜಿತ ಕಾರ್ಮಿಕರನ್ನು ಕೈಬಿಡಬಾರದು, ಅವರು ಕೆಲಸ ಕಳೆದುಕೊಂಡರೆ ಇಡೀ ಕುಟುಂಬವೇ ಬೀದಿಗೆ ಬರುವ ಸಾಧ್ಯತೆ ಇದೆ. ಆದ್ದರಿಂದ ಕಾರ್ಮಿಕರನ್ನು ಕೈಬಿಟ್ಟರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ನೇರ ಎಚ್ಚರಿಕೆಯನ್ನು ನೀಡಿದ್ದಾರೆ.
ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಗುಡ್ಡೆಯಂಗಡಿ, ಕಂದಾವರ ಸರ್ವಿಸ್ ಸ್ಟೇಷನ್‍ನಲ್ಲೂ ಪ್ರತಿಭಟನೆ ನಡೆದಿದೆ. ಪ್ರತಿಭಟನೆಗೆ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ, ತಾ.ಪಂ. ಸದಸ್ಯ ನಾಗೇಶ್ ಶೆಟ್ಟಿ, ಸೋಹನ್ ಅಧಿಕಾರಿ, ಪಂಚಾಯತ್ ಸದಸ್ಯರಾದ ಮಾಧವ, ನೋಣಯ್ಯ ಕೋಟ್ಯಾನ್, ಮಾಜಿ ಪಂಚಾಯತ್ ಸದಸ್ಯರಾದ ಹರಿಣಾಕ್ಷಿ, ಸ್ಥಳೀಯ ಮುಖಂಡರಾದ ಚಂದ್ರಹಾಸ ನಾರಳ, ಹಿಂದೂ ಜಾಗರಣ ವೇದಿಕೆ ಸಂಚಾಲಕರಾದ ಹರೀಶ್ ಮಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

