ಉಡುಪಿ : ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮಿಯ ಸಾವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇವರಿಗೆ ಒರ್ವ ಬ್ರಹ್ಮಾವರದ ಮಹಿಳೆಯ ಸಂಪರ್ಕ ಇದ್ದು, ಆಕೆ ಹೆಚ್ಚಿನ ದಿನಗಳಲ್ಲಿ ಸ್ವಾಮೀಜಿಗೆ ಇಷ್ಟವಾದ ಭೋಜನ ತಯಾರಿಸಿ ತರುತ್ತಿದ್ದಳು ಎನ್ನಲಾಗುತ್ತದೆ.

ಜಗ್ಗ ಎಂಬ ಒಬ್ಬ ಆಟೋ ಡ್ರೈವರ್ ಸುಮಾರು 3 ವರ್ಷಗಳ ಹಿಂದೆ ರಮ್ಯಾ ಶೆಟ್ಟಿಯನ್ನು ಸ್ವಾಮೀಜಿಗೆ ಪರಿಚಯಿಸಿದ್ದ. ಈ ಜಗ್ಗ ಸ್ವಾಮೀಜಿಯ ಪರಮಭಕ್ತ. ಅಲ್ಲದೇ ಈತ 20 ವರ್ಷಗಳಿಂದ ಅವರ ಸೇವೆ ಮಾಡುತ್ತಿದ್ದ.
ರಮ್ಯಾ ಶಿರೂರು ಮಠಕ್ಕೆ ಹೆಚ್ಚಾಗಿ ಬಂದು ಉಳಿದುಕೊಳ್ಳುತ್ತಿದ್ದಳು. ಬರುವಾಗ ಮನೆಯಿಂದ ಅಡುಗೆ ಮಾಡಿಕೊಂಡು ಬರುತ್ತಿದ್ದರು. ಅಲ್ಲದೇ ಸ್ವಾಮೀಜಿಗಾಗಿ ಗೋಡಂಬಿ ಜ್ಯೂಸ್, ಗೋಡಂಬಿ ಹುಡಿಯ ಬಾಟಲಿಗಳು ಈಗಲೂ ಇವೆ. ಸಂಜೆಯ ವೇಳೆ ಬರುತ್ತಿದ್ದ ರಮ್ಯಾ ರಾತ್ರಿ ಹೊತ್ತು ಹೆಚ್ಚು ಸಮಯ ಕಳೆಯುತ್ತಿದ್ದಳು. ಇದನ್ನು ಗಮನಿಸಿದ ಕೆಲವು ಭಕ್ತರು ವಿರೋಧಿಸಿದರು.

ಇಂತಹ ಸನ್ನಿವೇಶಗಳನ್ನು ನೋಡಿ ಸ್ವಾಮಿಗಳ ಸಹಾಯಕ ಶ್ರೀಪಾದ ಎಂಬಾತ ಈ ಮಹಿಳೆಗೆ ಎಚ್ಚರಿಕೆ ನೀಡಿದ್ದರು. ರಮ್ಯಾ ಮಠದ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಳು. ಇದರ ಜೊತೆಗೆ ಸ್ವಾಮೀಜಿ ಹೆಸರಿನಲ್ಲಿರುವ ಮಣಿಪಾಲದಲ್ಲಿರುವ ಶಿರೂರು ಲಕ್ಷ್ಮೀವರ ಕಾಂಪ್ಲೆಕ್ಸ್ನ ಬಾಡಿಗೆಯನ್ನು ರಮ್ಯಾ ಶೆಟ್ಟಿಯೇ ನೋಡಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ರಮ್ಯಾ ಸಂಸಾರಸ್ಥೆಯಾಗಿದ್ದು, ಆಕೆಗೆ ಈ ಹಿಂದೆಯೇ ವಿಚ್ಚೇದನ ಆಗಿತ್ತು. ಅಲ್ಲದೇ ಐದು ವರ್ಷದ ಮಗನಿದ್ದಾನೆ. ಸ್ವಾಮೀಜಿಯವರ ಸಾವಿನ ಮುನ್ನ ಮೂರು ಎಕರೆ ಸ್ಥಳವನ್ನು ರಮ್ಯಾ ಶೆಟ್ಟಿಗೆ ದಾನದ ರೀತಿಯಲ್ಲಿ ನೀಡಲಾಗಿತ್ತು. ಈ ವಿಷಯದ ಕುರಿತು ತನಿಖೆ ನಡೆಯಬೇಕು ಎಂದು ದ್ವಂದ್ವ ಮಠದ ವಿಶ್ವೇಶ ತೀರ್ಥವಲ್ಲಭ ಸ್ವಾಮೀಜಿಯವರು ಹೇಳಿದ್ದಾರೆ.
ಸೋಮವಾರ ಆಕೆ ಮಠಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಈ ಎಲ್ಲಾ ವಿಷಯಗಳು ರಮ್ಯಾ ಶೆಟ್ಟಿಯನ್ನು ಪೋಲಿಸರು ವಿಚಾರಣೆಗೆ ಒಳಪಡಿಸಿದಾಗ ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.
