ಮಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ೪೦ ಶಾಲೆಗಳು ತುಳು ಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಭಾಷೆಯನ್ನು ತ್ರತೀಯ ಭಾಷೆಯನ್ನಾಗಿ ಆಯ್ದುಕೊಂಡಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ನಡೆದ ದ.ಕ.ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ತುಳು ಭಾಷಾ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಇಂದು ಎಲ್ಲಡೆ ತುಳು ಭಾಷೆ, ಸಂಸ್ಕ್ರತಿಯತ್ತ ಜನರು ಒಲವು ತೋರುತ್ತಿರುವುದು ಆಶಾಧಾಯಕ ಬೆಳವಣಿಗೆಯಾಗಿದೆ ಎಂದರು.ಶಿಕ್ಷಣ ಸಮನ್ವಯಾಧಿಕಾರಿ ರಾಜೇಶ್ ಜಿ.ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೆ ಮಕ್ಕಳಿಗೆ ತುಳು ಭಾಷೆ, ಸಂಸ್ಕ್ರತಿಯನ್ನು ಕಲಿಸಿದರೆ ಮುಂದಿನ ದಿನಗಳಲ್ಲಿ ತುಳು ವ್ಯಾಪಕವಾಗಿ ಬೆಳೆಯುತ್ತದೆ ಎಂದರು.ಲೇಖಕ ಡಾ.ಗಿರೀಶ್ ಭಟ್ ಅಜೆಕ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುಳು ಭಾಷೆ, ನಾಡು, ಸಂಸ್ಕ್ರತಿಯ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ.

ತುಳು ಭಾಷೆ ಪ್ರಾಚೀನವಾದುದು, ಸಂಪದ್ಭರಿತವಾದುದು ಮತ್ತು ಪ್ರಬುದ್ಧವಾದುದು.ಈ ಭಾಷೆಯ ಇತಿಹಾಸವನ್ನು ಅರಿತಾಗ ತನ್ನಿಂತಾನೆ ಪ್ರೀತಿ ಹುಟ್ಟುತ್ತದೆ. ತುಳು ಭಾಷೆಯ ಸಾಂಸ್ಕ್ರತಿಕ ಸಂಸ್ಕ್ರತಿಯು ಸಮ್ರದ್ಧವಾಗಿರುವುದರಿಂದ ತುಳು ಬೆಳೆಯುವ ಎಲ್ಲಾ ಅರ್ಹತೆ ಇದೆ ಎಂದರು. ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

