ಬಂಟ್ವಾಳ: ಅವಳಿ ಜಿಲ್ಲೆಗಳಲ್ಲಿ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹಜ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆಹಾರ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಫರಂಗಿಪೇಟೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೂತನವಾಗಿ ಸ್ಥಾಪಿಸಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರ ಕಾಲದ ಈ ಶಾಲೆಯನ್ನು ಮುಚ್ಚುವ ಹಂತದಲ್ಲಿರುವ ಸಂದರ್ಭದಲ್ಲಿ ಇಲ್ಲಿನ ಟುಡೇ ಫೌಂಡೇಶನ್‍ನ ಮುಖ್ಯಸ್ಥರಾದ ಉಮರ್ ಫಾರೂಕ್ ಹಾಗೂ ಇನ್ನಿತರ ಕಾರ್ಯಕರ್ತರು ಶ್ರಮಿಸಿದ ಫಲವಾಗಿ ಶಾಲೆ ಉಳಿದಿದೆ. ಮಕ್ಕಳ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳ ಉಳಿವಿಗಾಗಿ ಪಣತೊಟ್ಟಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಈವರೆಗೆ ಒಟ್ಟು 200 ಮೌಲಾನಾ ಆಜಾದ್ ಶಾಲೆಗಳು ಆರಂಭಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 8 ಶಾಲೆಗಳಿದೆ. ಟುಡೇ ಫೌಂಡೇಶನ್‍ನಂತೆ ಶಾಲೆ ಉಳಿಯುವಿಗೆ ಪ್ರಯತ್ನಿಸುವ ಸಂಘಟನೆಗಳು ಮುಂದೆ ಬಂದಲ್ಲಿ ಶಾಲೆ ನಿರ್ಮಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ ಪುದು ಪಂಚಾಯತ್ ಅಭಿವೃದ್ದಿಯ ಪಥದಲ್ಲಿದೆ. ನಮ್ಮ ಶಾಲೆ ಎನ್ನುವ ಮನೋಭಾವ ಗ್ರಾಮಸ್ಥರಲ್ಲಿ ಬಂದಾಗ ಶಾಲೆ ಅಭಿವೃದ್ದಿ ಕಾಣಲು ಸಾಧ್ಯವಿದೆ. ಟುಡೇ ಫೌಂಡೇಶನ್‍ನ ಪ್ರಯತ್ನದ ಫಲವಾಘಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯೂ ಇಲ್ಲಿಗೆ ಒದಗಿದೆ ಎಂದು ತಿಳಿಸಿದ ಅವರು ರಾಜ್ಯ ಸರಕಾರ ಯಶಸ್ವಿಯಾಗಿ 5 ವರ್ಷ ನಡೆಯಲಿದೆ ಎಂದರು.
ಇದೇ ವೇಳೆ ಸಚಿವರಾದ ಝಮೀರ್ ಅಹ್ಮದ್ ಹಾಗೂ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಟುಡೇ ಫೌಂಡೇಶನ್‍ನ ಅಧ್ಯಕ್ಷ ಉಮರ್ ಫಾರೂಕ್ ಹಾಗೂ ಇನ್ನಿತರ ಸದಸ್ಯರನ್ನು ಸಚಿವದ್ವಯರು ಅಭಿನಂದಿಸಿದರು.

ವೇದಿಕೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯ ಶಾಹುಲ್ ಹಮೀದ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷ ಲಿಡಿಯಾ ಪಿಂಟೋ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಕಾರ್ಯದರ್ಶಿ ಯೂಸುಫ್ ಅಲಂಕಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಹಿರಿಯಾರಾದ ಎಫ್.ಎ. ಖಾದರ್, ಹಿದಾಯ ಪೌಂಡೇಶನ್ ಅಧ್ಯಕ್ಷ ಹನೀಫ್ ಗೋಳ್ತಮಜಲ್, ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಳಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಸಿರ್, ಇಸ್ಮಾಯಿಲ್ ಕೆ.ಇ.ಎಲ್, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಗ್ರಾಪಂ ಸದಸ್ಯರಾದ ಹಾಶಿರ್ ಪೇರಿಮಾರ್, ಮುಹಮ್ಮದ್ ಮೋನು, ಇಕ್ಬಾಲ್ ಸುಜೀರ್, ರಿಯಾಝ್ ಕುಂಪನಮಜಲ್, ಸಂತೋಷ್, ನೆತ್ತರೆಕೆರೆ, ಝೀನತ್ ಕುಂಜತ್ಕಳ, ಬಾಸ್ಕರ್ ರೈ ಕುಂಜತ್ಕಳ, ರಝೀಯಾ ಫರಂಗಿಪೇಟೆ, ಹುಸೈನ್ ಎಂ, ನಝೀರ್ ಹತ್ತನೇಮೈಲ್‍ಕಲ್ಲು, ಮುಮ್ತಾಝ್ ಸುಜೀರ್, ರಶೀದಾ ಬಾನು, ಸುಜಾತಾ ಮಾರಿಪ್ಪಳ್ಳ, ರೆಹನಾ ಮಾರಿಪ್ಪಳ್ಳ, ಲವೀನಾ ಡಿಸೋಜಾ ಕುಂಪನಮಜಲ್, ಜಯಂತಿ ಕುಂಡೆಲ್, ಸಂತೋಷ್ ನೆತ್ರೆಕೆರೆ, ಮನೋಜ್ ಆಚಾರ್ಯ, ಹೇಮಲತಾ, ಮಾಜಿ ತಾಪಂ ಸದಸ್ಯ ಇಕ್ಬಾಲ್ ದರ್ಬಾರ್, ಮಾಜಿ ಅಧ್ಯಕ್ಷ ಪ್ರಕಾಶ್ ಚಂದ್ರ ರೈ, ಝಾಹಿರ್ ಅಬ್ಬಾಸ್ ಉಪಸ್ಥಿತರಿದ್ದರು.
ಜಿಪಂ ಮಾಜಿ ಸದಸ್ಯ, ಟುಡೇ ಫೌಂಡೇಶನ್‍ನ ಅಧ್ಯಕ್ಷ ಉಮರ್ ಫಾರೂಕ್ ಅವರು ಸ್ವಾಗತಿಸಿ, ಶಾಲೆಯ ಹಾಗೂ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು. ಅಬ್ದುಲ್ ಹನೀಫ್ ನಿರೂಪಿಸಿ, ವಂದಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ಉಚಿತ ಬಾಗ್ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
