ಬಂಟ್ವಾಳ: ಬಿ.ಸಿ.ರೋಡ್ ಮಿನಿ ವಿಧಾನಸೌಧದಲ್ಲಿ ಕಳೆದ ವಿಧಾನಸಭೆ ಚುನಾವಣೆ ಬಳಿಕ ತಂತ್ರಾಂಶ ಬದಲಾವಣೆ ಮತ್ತಿತರ ಕಾರಣಗಳಿಂದ ಮುಚ್ಚಿಕೊಂಡಿದ್ದ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ಮಟ್ಟದ ‘ಅಟಲ್ ಜನಸ್ನೇಹಿ ಕೇಂದ್ರ’ದಲ್ಲಿ ಗುರುವಾರ ಭಾರೀ ನೂಕುನುಗ್ಗಲು ದೃಶ್ಯ ಕಂಡು ಬಂದಿದೆ. ಸರ್ವರ್ ದೋಷ ನೆಪ, ನಾಗರಿಕರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿಂದೆ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿನ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪಾಣೆಮಂಗಳೂರು ಹೋಬಳಿ ಮಟ್ಟದ ‘ಅಟಲ್ ಜನಸ್ನೇಹಿ ಕೇಂದ್ರ’ವು ನಾಗರಿಕರ ಒತ್ತಾಯಕ್ಕೆ ಮಣಿದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ ಅವರ ಸಲಹೆಯಂತೆ ಕಳೆದ ಕೆಲವು ಸಮಯದಿಂದ ಇಲ್ಲಿಗೆ ಸ್ಥಳಾಂತರಗೊಂಡಿದೆ. ಉಪ ಖಜಾನೆಗೆ ಮೀಸಲಿಟ್ಟ ಈ ಕೊಠಡಿಯಲ್ಲಿ ಸ್ಥಳಾವಕಾಶ ಕೊರತೆಯೂ ಎದ್ದು ಕಾಣುತ್ತಿದೆ.

ಒಂದೆಡೆ ಪಡಿತರ ಚೀಟಿಗೆ ಕುಟುಂಬದ ಪ್ರತೀ ಸದಸ್ಯರಿಂದ ಪತ್ರಯೇಕ ಆದಾಯ ದೃಢೀಕರಣ ನೀಡಲು ಸರ್ಕಾರ ಸೂಚಿಸಿದೆ. ಇನ್ನೊಂದೆಡೆ ರೈತರಿಗೆ ಪಹಣಿಪತ್ರ, ಖಾತೆ ಸಂಖ್ಯೆ, ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣಪತ್ರಕ್ಕೂ ಇಲ್ಲಿಯೇ ಬರಬೇಕು. 94ಸಿ ಮತ್ತು 94ಸಿಸಿ ಅರ್ಜಿ ಸಲ್ಲಿಕೆ ಸೇರಿದಂತೆ ಜಮೀನಿನ ದೃಢೀಕೃತ ದಾಖಲೆ ಪತ್ರ ಪಡೆಯುವುದಕ್ಕಾಗಿ ವಿವಿಧೆಡೆಯಿಂದ ಅಪಾರ ಮಂದಿ ಕೆಲಸಕ್ಕೆ ರಜೆ ಹಾಕಿ ಧಾವಿಸಿ ಬಂದರೂ ಇಲ್ಲಿ ಸರ್ವರ್ ದೋಷ, ಕಂಪ್ಯೂಟರ್ ದುರಸ್ತಿಯಲ್ಲಿದೆ ಎಂಬ ಕಾರಣಕ್ಕಾಗಿ ವಾಪಾಸು ಹೋಗುತ್ತಿದ್ದಾರೆ. ಇಲ್ಲಿಗೆ ಬಂದ ನಾಗರಿಕರಿಗೆ ಕೂರಲು ಸೂಕ್ತ ವ್ಯವಸ್ಥೆಯಿಲ್ಲದೆ ದಿನವಿಡೀ ಕಟ್ಟಡದ ಜಗುಲಿಯಲ್ಲಿ ನಿಲ್ಲುವಂತಾಗಿದೆ ಎಂದು ಪದ್ಮನಾಭ ಎಲ್ಪೇಲು ಎಂಬವರು ಆರೋಪಿಸಿದ್ದಾರೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ಮಟ್ಟದ ಈ ಎರಡೂ ‘ಅಟಲ್ ಜನಸ್ನೇಹಿ ಕೇಂದ್ರ’ದಲ್ಲಿ ಸ್ಥಳಾವಕಾಶವೂ ಇಲ್ಲ. ಕೇವಲ ಎರಡೆರಡು ಗುತ್ತಿಗೆ ಆಧಾರಿತ ಮಹಿಳಾ ನೌಕರರರು ಒದ್ದಾಟ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಇವರಿಗೆ ಮಾಸಿಕ ವೇತನವೂ ಪಾವತಿಯಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಮಂಗಳೂರು ಪುತ್ತೂರು ಮಾದರಿಯಲ್ಲಿ ಮಿನಿ ವಿಧಾನಸೌಧ ಒಳಾಂಗಣದಲ್ಲಿ ಪ್ರತ್ಯೇಕ ಕೇಂದ್ರ ತೆರೆಯಲು ಇಲ್ಲಿನ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಸೂಕ್ತ ಅನುದಾನ ಒದಗಿಸದಿರುವುದೇ ಪ್ರಮುಖ ಕಾರಣ ಎಂಬ ಅಭಿಪ್ರಾಯವೂ ಅಧಿಕಾರಿಗಳಿಂದ ಕೇಳಿ ಬಂದಿದೆ.
ಇದೇ 16ರಿಂದ 21ರತನಕ ಬಿ.ಸಿ.ರೋಡಿನ ಸಾಮಥ್ರ್ಯ ಸೌಧ ಕಟ್ಟಡದಲ್ಲಿ ಆಯೋಜಿಸಲಾಗಿರುವ ‘ಆಧಾರ್ ಅದಾಲತ್’ ಕಾರ್ಯಕ್ರಮದಲ್ಲಿ ಈಗಾಗಲೇ 300 ಮಂದಿಗೆ ಟೋಕನ್ ವಿತರಿಸಿದ್ದು, ಈ ಪೈಕಿ 297 ಮಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೂ 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ ಶುಚಿಗೊಳಿಸಲು ಕೇವಲ ಎರಡು ಸಿಬ್ಬಂದಿಗಳಿದ್ದಾರೆ. ಇಲ್ಲಿಗೆ ಬರುವ ನಾಗರೀಕರು ಮಾಸಿಕ ಕೇವಲ ತಲಾ ರೂ 2,500 ಮೊತ್ತ ಪಾವತಿಸುತ್ತಿರುವ ಪರಿಣಾಮ ಸ್ವಚ್ಛತೆಗೆ ಮನ್ನಣೆ ಸಿಕ್ಕಿಲ್ಲ ಎನ್ನುತ್ತಿದ್ದಾರೆ.
ಇಲ್ಲಿನ ‘ಅಟಲ್ ಜನಸ್ನೇಹಿ ಕೇಂದ್ರ’ದಲ್ಲಿ ನಾಗರಿಕರ ಒತ್ತಡ ನಿವಾರಣೆ ಮತ್ತು ಸರ್ವರ್ ದೋಷ ಸರಿಸಲು ಕಂಪ್ಯೂಟರ್ ಅಪರೇಟರ್‍ಗಳನ್ನು ಬೆಳಿಗ್ಗೆ 10 ಗಂಟೆಗೆ ಬದಲಾಗಿ 9.30 ಗಂಟೆಗೆ ಬರಲು ಸೂಚಿಸಲಾಗಿದ್ದು, ಮಧ್ಯಾಹ್ನ ಮತ್ತು ಸಂಜೆಯೂ ಕೆಲಸದ ಸಮಯ ಬದಲಾವಣೆಗೊಳಿಸಲಾಗುವುದು ಎಂದು ಪ್ರಭಾರ ಉಪ ತಹಶೀಲ್ದಾರ್ ಸೀತಾರಾಮ್ ಪ್ರತಿಕ್ರಿಯಿಸಿದ್ದಾರೆ.
