ಕುಪ್ಪೆಪದವು: ಮರವೂರು ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಹಲಗೆಯನ್ನು ತೆರವುಗೊಳಿಸದಿರುವುದರಿಂದ ಅದ್ಯಪಾಡಿ, ಪಡುಶೆಡ್ಡೆ, ಮೂಡುಶೆಡ್ಡೆ, ಕೊಳಕೆಬೈಲು ಸುತ್ತಲ ಪ್ರದೇಶದಲ್ಲಿ ನದಿ ನೀರು ನಿಂತು, ಸಾವಿರಾರು ಎಕ್ರೆ ಕೃಷಿಭೂಮಿ ಜಲಾವೃತಗೊಂಡು ನಷ್ಟ ಅನುಭವಿಸಿದ್ದೇವೆ. ಆದ್ದರಿಂದ ತಮಗೆ ಪರಿಹಾರ ನೀಡುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಕೃಷಿಕರು ಪಡುಶೆಡ್ಡೆಯ ಮರವೂರು ಬಹುಗ್ರಾಮ ಕುಡಿಯುವ ನೀರಿನ ಕಿಂಡಿ ಅಣೆಕಟ್ಟಿನ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

kindi anekattu (4)
ಜಿಲ್ಲಾ ಪಂಚಾಯತ್ ಸ್ವಾಮ್ಯದಲ್ಲಿ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯು ಈ ಕಿಂಡಿ ಅಣೆಕಟ್ಟಿನ ನಿರ್ವಹಣೆ ನಡೆಸುತ್ತಿದೆ. ಆದರೆ ಇದರ ಹಲಗೆಯನ್ನು ತೆಗೆಯದ ಕಾರಣ ಪಡುಶೆಡ್ಡೆ, ಮೂಡುಶೆಡ್ಡೆ ಸುತ್ತಲ ಪ್ರದೇಶ ಜಲಾವೃತಗೊಂಡಿವುದರಿಂದ ಸ್ಥಳೀಯ ಸುಮಾರು 50 ಮನೆಯವರು ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ತೋಟಕ್ಕೆ ನೀರು ನುಗ್ಗಿದ ಕಾರಣ ಅಡಕೆ ಮರಗಳು ಕೊಳೆತು ಹೋಗಿದ್ದು, ಮನೆಯ ಅಂಗಳದಲ್ಲಿ ನೀರು ತುಂಬಿಕೊಂಡಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ದುಸ್ತರವಾಗಿದೆ. ಕಿಂಡಿ ಅಣೆಕಟ್ಟಿನ ಪಡುಶೆಡ್ಡೆ ಭಾಗದಿಂದ ಮರವೂರು ಪಾಶ್ರ್ವಕ್ಕೆ 10 ಅಡಿ ಆಳಕ್ಕೆ ನೀರು ಧುಮ್ಮಿಕ್ಕುತ್ತಿದ್ದು ಇದಕ್ಕೆ ಹಾಸಲಾದ ಹಲಗೆಗಳನ್ನು ತೆರುವುಗೊಳಿಸದಿರುವುದು ಪ್ರಮುಖ ಕಾರಣ. ಅಲ್ಲದೆ ಅಣೆಕಟ್ಟು ನಿರ್ವಹಣೆಯ ಹೊಣೆ ಹೊತ್ತುಕೊಂಡ ಮೊಗರೋಡಿ ಕಂಪೆನಿಯ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಈ ಎಲ್ಲ ಕಾರಣದಿಂದ ನೀರು ನುಗ್ಗಿ ಬೆಳೆ ನಾಶವಾಗುತ್ತಿದ್ದು ಇದಕ್ಕೆ ಯಾರು ಹೊಣೆ ಎಂದು ಪಡುಶೆಡ್ಡೆ ಕೃಷಿಕ ಕರುಣಾಕರ ನಾಯಕ್ ಪ್ರಶ್ನಿಸಿದರು.

kindi anekattu (3)
ಪ್ರಗತಿಪರ ಕೃಷಿಕ ರಮಾನಾಥ ಅತ್ತರ್(ಚಿತ್ತಣ್ಣ) ಎಂಬವರು ಮಾತನಾಡಿ, ಕಳೆದ ವರ್ಷ ಇಲ್ಲಿ ಈ ಸಮಸ್ಯೆ ಇರಲಿಲ್ಲ. ಈ ವರ್ಷ ಮಳೆ ಬೇಗ ಬಂದಿದ್ದು, ಕಿಂಡಿ ಅಣೆಕಟ್ಟು ನಿರ್ವಹಿಸುತ್ತಿರುವ ಮೊಗರೋಡಿ ಕನ್‍ಸ್ಟ್ರಕ್ಷಶನಿನವರು ಅಣೆಕಟ್ಟಿನ ಎಲ್ಲ ಹಲಗೆ ತೆಗೆಯಲಿಲ್ಲ. ಹಾಗಾಗಿ ಒಂದು ಕಡೆ ಜಲಾವೃತಗೊಂಡಿದ್ದು, ನಮ್ಮ ಎಕ್ರೆಗಟ್ಟಲೆ ಕೃಷಿ ನಷ್ಟಗೊಂಡಿದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

kindi anekattu (1)
ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಪೆನಿಯ ನಿರ್ವಹಣೆಯ ಕೊರತೆಯಿಂದ ಇಲ್ಲಿ ಈ ಬಾರಿ ಗಂಭೀರ ಸಮಸ್ಯೆ ತಲೆದೋರಿದ್ದು ಈ ಬಗ್ಗೆ ಜಿಪಂ ಆಡಳಿತದ ಗಮನಹರಿಸಲಾಗುವುದು. ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನರಲ್ಲೂ ಈ ವಿಷಯ ಚರ್ಚಿಸಿಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮೊಗರೋಡಿ ಕನ್‍ಸ್ಟ್ರಕ್ಷನಿನ ರೈಟರ್ ಸುಬ್ಬು ಎಂಬವರು ಆಗಮಿಸಿ, ಅಣೆಕಟ್ಟಿನ 80 ಕಿಂಡಿಗಳಿಗೆ ತಲಾ ಮೂರರಂತೆ ಒಟ್ಟು 240 ಕಬ್ಬಿಣದ ಹಲಗೆ ಹಾಕಲಾಗಿದ್ದು, ಇದರಲ್ಲಿ 154 ಹಲಗೆ ತೆಗೆಯಲಾಗಿದೆ. ಅಕಾಲಿಕ ಮಳೆ, ನೆರೆಯಿಂದ ಉಳಿದ ಹಲಗೆ ತೆಗೆಯಲಾಗಿಲ್ಲ. ಮೇ ಅಂತ್ಯಕ್ಕೆ ತೆಗೆಯಬೇಕಿದ್ದ ಹಲಗೆ ಮುಂಚಿತವಾಗಿ ತೆಗೆಯಲು ನಮಗೆ ಅಧಿಕಾರವಿಲ್ಲ. ಎಪ್ರಿಲಿನಲ್ಲೇ ಮಳೆ ಹೆಚ್ಚಾಗಿ ಪ್ರವಾಹ ಬಂತು. ಕೆಲವು ಹಲಗೆ ಹಾಗೆಯೇ ಉಳಿದುಕೊಂಡಿದೆ ಸ್ಪಷ್ಟನೆ ನೀಡಿದರು.

kindi anekattu (2)
ಇದರಿಂದ ಆಕ್ರೋಶಗೊಂಡ ಕೃಷಿಕರು ಮುತ್ತಿಗೆ ಹಾಕಿ ನಿಮ್ಮ ಅಸಮರ್ಪಕ ನಿರ್ವಹಣೆ ಹಾಗೂ ಬೇಜವಾಬ್ದಾರಿತನದಿಂದ ನಾವು ಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ನರೇಂದ್ರ ಕೆ. ಭಂಡಾರಿ ಕೊಳಕೆಬೈಲು, ರವಿಶಂಕರ್ ಕೊಳಕೆಬೈಲು, ರವೀಂದ್ರ ಶೆಟ್ಟಿ ಮುಗೆರುಗುತ್ತು ಮೂಡುಶೆಡ್ಡೆ, ರತ್ನಾಕರ ಶೆಟ್ಟಿ ಮೂಡುಶೆಡ್ಡೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *