ಉಳಾಯಿಬೆಟ್ಟು: ಹಾಲಿಗೆ ಏಳರಿಂದ ಎಂಟು ಗಂಟೆಗಳ ಕಾಲ ಜೀವಿತಾವಧಿ ಇರುತ್ತದೆ. ಈ ಅವಧಿಯೊಳಗಡೆ ಹಾಲನ್ನು ಶೀತಲೀಕರಣ ಘಟಕಕ್ಕೆ ತಲುಪುವಂತೆ ಮಾಡಿದರೆ ಗುಣಮಟ್ಟದ ಹಾಲನ್ನು ಪಡೆಯಬಹುದು. ಪೆರ್ಮಂಕಿಯಲ್ಲಿ ಸಾಂದ್ರ ಶೀತಲೀಕರಣ ಘಟಕವನ್ನು ಸ್ಥಾಪಿಸಿರುವುದರಿಂದ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯವಿದೆ. ಹಾಲಿನ ವಿಚಾರದಲ್ಲಿ ಪೆರ್ಮಂಕಿ ಮಹಿಳೆಯರ ಸಾಧನೆ ನಿಜವಾಗಿಯೂ ಮೆಚ್ಚುವಂತಹಾ ವಿಚಾರವಾಗಿದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಹೇಳಿದರು.ಅವರು ಭಾನುವಾರ ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ವತಿಯಿಂದ ಪೆರ್ಮಂಕಿಯಲ್ಲಿ ನಡೆದ ಸಾಂದ್ರ ಶೀತಲೀಕರಣ ಘಟಕ ಮತ್ತು ಸಮೃದ್ಧಿ ಸ್ವ-ಸಹಾಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

_PRE5821
ಹಾಲಿನ ಉತ್ಪಾದನೆಯಲ್ಲಿ ಪೆರ್ಮಂಕಿ ಮಹಿಳೆಯರನ್ನು ನೋಡಿ ಕಲಿಯಬೇಕಾಗಿದೆ. ಗುಣಮಟ್ಟದ ಪಶು ಆಹಾರ ಪೂರೈಕೆಯನ್ನು ಸ್ವತಃ ಮಾಡಿಕೊಂಡು ಗುಣಮಟ್ಟದ ಹಾಲಿನ ಸಂಗ್ರಹಣೆಯನ್ನು ನಿರ್ವಹಿಸುತ್ತಿದ್ದಾರೆ. ಸರಕಾರ ಪಶು ಆಹಾರವನ್ನು ಪೂರೈಸುತ್ತಿದ್ದರೂ ಇಲ್ಲಿನವರು ಜಾನುವಾರುಗಳಿಗೆ ಗುಣಮಟ್ಟದ ಪಶು ಆಹಾರವನ್ನು ಉತ್ಪಾದಿಸುತ್ತಿದ್ದಾರೆ. ಈಗ ಸರಕಾರದ ವತಿಯಿಂದ ಗುಣಮಟ್ಟದ ಪಶುಆಹಾರ ಪೂರೈಕೆಯಾಗುತ್ತಿದ್ದರೂ ಇಲ್ಲಿ ಸ್ವತಃ ಆಹಾರ ಸಿಗುತ್ತಿದೆ. ಇಲ್ಲಿ ಶೀತಲೀಕರಣ ಘಟಕ ಸ್ಥಾಪಿಸಿರುವುದರಿಂದ ಹಾಲಿನ ಸಂಗ್ರಹಣೆಯನ್ನು ಸಮಗ್ರವಾಗಿ ನಿರ್ವಹಿಸಬಹುದು. ಕೆಚ್ಚಲಿನಿಂದ ಹಾಲಿಗೆ ಬರುವ ಬ್ಯಾಕ್ಟೀರಿಯವು ಹಾಲು ಶೀತಲೀಕರಣ ಘಟಕ ತಲುಪುವವರೆಗೆ ಅದರ ಸಂಖ್ಯೆ ವೃದ್ಧಿಸುತ್ತಾ ಹೋಗುವುದರಿಂದ ಹಾಲು ಗುಣಮಟ್ಟ ಕಳೆದುಕೊಳ್ಳುವ ಭೀತಿ ಇರುವುದರಿಂದ ಇಲ್ಲಿ ಶೀತಲೀಕರಣ ಘಟಕ ಸ್ಥಾಪಿಸಿ ಹಾಲು ಕೆಡದಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಮಹಿಳೆಯರು ಹಾಲನ್ನು ಇನ್ನಷ್ಟು ಉತ್ಪಾದಿಸುವಂತೆ ರವಿರಾಜ ಹೆಗ್ಡೆ ಕರೆ ನೀಡಿದರು._PRE5810
ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಇದರ ನಿರ್ದೇಶಕರಾಗಿರುವ ಕೆ.ಪಿ. ಸುಚರಿತ ಶೆಟ್ಟಿಯವರು ಮಾತನಾಡಿ ಇಡೀ ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ದ.ಕ ಜಿಲ್ಲೆಗೆ ಉತ್ತಮ ಹೆಸರಿದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಅವರು ಮಾತಾಡಿ, ಹಾಲಿನ ಕ್ಷೇತ್ರದಲ್ಲಿ ಪೆರ್ಮಂಕಿ ಮಹಿಳೆಯರ ಸಾಧನೆ ಅಮೋಘವಾಗಿದ್ದು, ಕ್ಷೀರ ಕ್ರಾಂತಿಯಲ್ಲಿ ಹೊಸ ದಾಖಲೆ ಸೃಷ್ಟಿಸಿ ಕೊಡುಗೆ ಸಲ್ಲಿಸಿದ್ದಾರೆ ಎಂದು ನುಡಿದರು. ಸ್ವಾಗತ ಭಾಷಣವನ್ನು ನಿರ್ವಹಿಸಿದ ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಸುಭದ್ರಾ ರಾವ್ ಮಾತಾಡಿ, ಇಲ್ಲಿನ ಮಹಿಳೆಯರು ಹಾಲು ಉತ್ಪಾದನೆಯಲ್ಲಿ ನಿರಂತರ ಶ್ರಮ ವಹಿಸಿರುವ ಫಲವಾಗಿ ಇಂದು ಶೀತಲೀಕರಣ ಘಟಕ ಸ್ಥಾಪಿಸಲು ಕಾರಣವಾಗಿದೆ. ಇದಕ್ಕೆ ಹಲವಾರು ಮಂದಿ ಉತ್ತಮ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಲು ಉತ್ಪಾದಿಸಲು ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳಾಯಿಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿರುವ ವಸಂತ್ ಕುಮಾರ್ ಪೆರ್ಮಂಕಿ ಅಧ್ಯಕ್ಷೀಯ ನೆಲೆಯಲ್ಲಿ ಮಾತಾಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕರಾದ ಡಾ| ನಿತ್ಯಾನಂದ ಭಕ್ತ, ನಿರ್ದೇಶಕರಾದ ಕೆ.ಎಂ. ಕೃಷ್ಣ ಭಟ್, ತಾಲೂಕು ಪಂಚಾಯತ್ ಸದಸ್ಯರಾದ ಅಪ್ಸತ್, ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾಗಿರುವ ಫ್ರಾನ್ಸಿಸ್ ಕುಟಿನ್ಹೋ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾಗಿರುವ ವಿನಯ ಕುಮಾರ್ ಶೆಟ್ಟಿ, ವಿಸ್ತರಣಾಧಿಕಾರಿ ಜಾನೆಟ್ ರೊಸರಿಯೋ, ಕಾರ್ಯದರ್ಶಿ ಹರಿಣಾಕ್ಷಿ ಸೇರಿ ಹಲವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *