ಗುರುಪುರ : ಮುಚ್ಚಲಾಗಿರುವ ಗುರುಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸುವ ಸಲುವಾಗಿ ಭಾನುವಾರ ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಸ್ವಾಮೀಜಿಗಳು, ಹಳೆ ವಿದ್ಯಾರ್ಥಿಗಳು, ನಾಗರಿಕರು ಹಾಗೂ ಶಾಲಾ ಅಭಿಮಾನಿಗಳ ಬೃಹತ್ ಸಮಾಲೋಚನಾ ಸಭೆ ನಡೆದು ಮೆರವಣಿಗೆ ಮೂಲಕ ಶಾಲೆಯತ್ತ ಸಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕೊನೆಯಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆಯಿತು.ಶಾಲೆಯ ಬೀಗ ಮುರಿದು ದರೋಡೆ ನಡೆಸಲಾಗಿದೆ ಎಂದು ಅನಾಮಿಕರ ದೂರಿನ ಆಧಾರದಲ್ಲಿ ಬಜಪೆ ಪೊಲೀಸರು ಶಾಲೆಯತ್ತ ಬಂದು ವಿಚಾರಣೆ ನಡೆಸಿ ತೆರಳಿದ್ದಾರೆ. ಪ್ರತಿಭಟನೆಯ ಮುನ್ನ ಸತ್ಯದೇವತಾ ಸಭಾಗೃಹದಲ್ಲಿ ನಡೆದ ಸಭೆಯಲ್ಲಿ ಮುಚ್ಚಿದ ಶಾಲೆಯನ್ನು ಹೇಗಾದರೂ ಉಳಿಸಲೇಬೇಕೆಂದು ಪಣತೊಡಲಾಯಿತು. ಸಭೆಯ ನೇತೃತ್ವ ವಹಿಸಿದ್ದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತಾಡಿ, ಶತಮಾನ ಕಂಡ ಈ ಶಾಲೆಯನ್ನು ಒಂದು ಕ್ರಾಂತಿಕಾರಿ ಹೋರಾಟ ಮೂಲಕ ಉಳಿಸಬೇಕು. ಅದನ್ನು ಇಂದಿನಿಂದಲೇ ಆರಂಭಿಸಿ, ಶಾಲೆಗೆ ಜಡಿದಿರುವ ಬೀಗ ಮುರಿದು, ಹೊಸ ಬೀಗ ಹಾಕಬೇಕು. ಇದು ಶಾಲೆಯ ಮೇಲಿನ ಅಭಿಮಾನಿಗಳ ಪ್ರತಿಭಟನೆಯಾಗಿ ಮೂಡಿಬರಬೇಕು ಎಂದು ಕರೆ ನೀಡಿದರು.

ಗುರುಪುರ ಶಾಲೆ ಅನುದಾನಿತ ಶಾಲೆಯಾಗಿಯೇ ಮುಂದುವರಿಯಲಿ. ಇಲ್ಲದಿದ್ದರೆ ಶಾಲೆಗಾಗಿ ಹಣಕಾಸಿಗಾಗಿ ನಾವೆಲ್ಲ ಭಿಕ್ಷೆ ಎತ್ತೋಣ. ಶಾಲೆಯ ಹೆಸರಲ್ಲಿ ಭಿಕ್ಷೆ ಬೇಡಿದರೆ ಗೌರವ ಹೆಚ್ಚುವ ಜೊತೆಗೆ ಯಾರೂ ನಿರಾಕರಿಸುವುದಿಲ್ಲ. ಇಲ್ಲಿ ಹೊಸ ಆಡಳಿತ ಸಮಿತಿಯೊಂದಿಗೆ ಶಾಲೆ ಆರಂಭಿಸುವುದಾದರೆ ನಮ್ಮ ಮಠದಲ್ಲಿರುವ ಎಲ್ಲ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತೇನೆ ಎಂದವರು ಭರವಸೆ ನೀಡಿದರು.
ಹಳೆ ವಿದ್ಯಾರ್ಥಿ ರಾಜೀವ ಶೆಟ್ಟಿ ಸಲ್ಲಾಜೆ ಮಾತಾಡಿ, ಶಾಲೆ ಉಳಿಸಲು ನಾವೆಲ್ಲರೂ ಕೈಜೋಡಿಸಿ ಆರ್ಥಿಕ ಹಾಗೂ ಇತರ ಸಂಪನ್ಮೂಲ ಕ್ರೋಡಿಕರಿಸೋಣ ಎಂದರು. ಮಾಜಿ ತಾಪಂ ಸದಸ್ಯ ಯಶವಂತ ಆಳ್ವ ಮಾತನಾಡುತ್ತ, ಶಾಲೆ ಉಳಿಸುವ ಪ್ರಥಮ ಹಂತದಲ್ಲಿ ಶಿಕ್ಷಣ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡಬೇಕು. ಅದಕ್ಕಾಗಿ ಮೋದಲು ಸಮಿತಿಯೊಂದರ ರಚನೆಯಾಗಬೇಕು. ಈಗ ಪ್ರಾಥಮಿಕ ಶಾಲೆ ಮುಚ್ಚಿರುವುದರಿಂದ ಗುರುಪುರದ ಹೈಸ್ಕೂಲ್ ಮೇಲೆ ಹೊಡೆತ ಬೀಳಲಿದೆ ಎಂದರು. ಹಳೆ ವಿದ್ಯಾರ್ಥಿಗಳಾದ ಕಿಟ್ಟಣ್ಣ ರೈ, ಧನಂಜಯ ಗುರುಪುರ, ಉದ್ಯಮಿ ಸಾಹುಲ್ ಹಮೀದ್ ಹಾಗೂ ಕರಾವಳಿ ವೀರಶೈವ ಮಹಾ ಸಂಘದ ಪದಾಧಿಕಾರಿ ಪ್ರೊ. ಜಯಪ್ಪ ಮಾತಾಡಿದರು. ಈ ವರ್ಷದಿಂದ ಅಥವಾ ಮುಂದಿನ ವರ್ಷದಿಂದಲಾದರೂ ಶಾಲೆ ಪುನರಾರಂಭಿಸುವ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಜಿ ಲಕ್ಷ್ಮಣ ಶೆಟ್ಟಿ ಶಾಲೆಯ ಇತಿಹಾಸ-ಮಾಹಿತಿ ನೀಡಿದರು. ವೇದಿಕೆಯಲ್ಲಿ ಗುರುಪುರ ಶ್ರೀ ಜಂಗಮ ಮಠದ ರುದ್ರಮುನಿ ಸ್ವಾಮಿ, ತಾಪಂ ಸದಸ್ಯ ಸಚಿನ್ ಅಡಪ, ಬೆಸೆಂಟ್ ಕಾಲೇಜಿನ ಉಪನ್ಯಾಸಕ ಡಾ. ದಿನೇಶ್ ಪೈ, ದೇವದಾಸ ಅಂಚನ್, ಬೆಂಗಳೂರು ಉದ್ಯಮಿ ಸತೀಶ್, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಶೀನಪ್ಪ ಕೊಟ್ಟಾರಿ ಇದ್ದರು. ಅಂಚೆ ಸಿಬ್ಬಂದಿ ಜಿ. ರತ್ನಾಕರ ನಿರೂಪಿಸಿದರು. ಹಳೆ ವಿದ್ಯಾರ್ಥಿ ಮೋಹನ್ ಪ್ರಭು ಸ್ವಾಗತ, ವಂದನಾರ್ಪಣೆ ಮಾಡಿದರು.
ಶಾಲೆಯತ್ತ ಮೆರವಣಿಗೆ:
ಸಭೆ ಮುಗಿದ ಬಳಿಕ ಗುರುಪುರ ಪೇಟೆಯ ಮೂಲಕ ಮೆರವಣಿಯಲ್ಲಿ ಸಾಗಿದ ಶಾಲಾ ಅಭಿಮಾನಿಗಳು ಶಾಲೆಗೆ ಜಡಿದ ಬೀಗ ಮುರಿದು, ಶಾಲೆಯೊಳಗೆ ಸಭೆ ನಡೆಸಿದರು. ಬಳಿಕ ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ವಜ್ರದೇಹಿ ಸ್ವಾಮಿ ಹಾಗೂ ಶಾಲಾ ಭೂಮಾಲಕತ್ವ ಹೊಂದಿರುವ ಗುರುಪುರ ಶ್ರೀ ಜಂಗಮ ಮಠದ ರುದ್ರಮುನಿ ಸ್ವಾಮಿ ಹಾಗೂ ನೂರಾರು ಹಳೆ ವಿದ್ಯಾರ್ಥಿಗಳು ಇದ್ದರು.
ಪೊಲೀಸ್ ಆಗಮನ: ಸಾಂಕೇತಿಕ ಪ್ರತಿಭಟನೆ ಮುಗಿದು ಎಲ್ಲರೂ ತೆರಳುತ್ತಿದ್ದಂತೆ ಬಜಪೆ ಪೊಲೀಸರು ಶಾಲೆಯತ್ತ ಆಗಮಿಸಿ ವಿಚಾರಣಡೆ ನಡೆಸಿದರು. ಈ ವೇಳೆ ವಜ್ರದೇಹಿ ಹಾಗೂ ರುದ್ರಮುನಿ ಸ್ವಾಮೀಜಿಗಳು ಇದ್ದರು. ಪೊಲೀಸರಲ್ಲಿ, ನಿಮ್ಮ ಆಗಮನದ ಉದ್ದೇಶವೇನು? ಯಾರ ದೂರಿನ ಆಧಾರದಲ್ಲಿ ಆಗಮಿಸಿದ್ದೀರಿ? ಎಂದು ಪ್ರಶ್ನಿಸಿದಾಗ ಪೊಲೀಸರು ಶಾಲೆಯಲ್ಲಿ ದರೋಡೆ ನಡೆದಿದೆ ಎಂಬ ಮಾಹಿತಿಯ ಮೇರೆಗೆ ಆಗಮಿಸಬೇಕಾಯಿತು ಎಂದು ನುಡಿದರು. ಆಗ ಅಲ್ಲಿದ್ದವರು, ಶಾಲೆಯನ್ನು ಉಳಿಸುವ ಸಲುವಾಗಿ ಪ್ರತಿಭಟನೆ ನಡೆದಿದೆಯೇ ಹೊರತು ದರೋಡೆ ನಡೆದಿಲ್ಲ ಎಂದು ಸಮಜಾಯಿಷಿ ಹೇಳಿದ್ದಾರೆ. ಮಾಜಿ ಆಡಳಿತ ಮಂಡಳಿಯವರೆನ್ನಲಾದ ಅನಾಮಿಕ ವ್ಯಕ್ತಿಯೊಬ್ಬರು ದರೋಡೆ ನಡೆದಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ವಿಚಾರಣೆ ನಡೆಸಿದೆ ಎಂದು ಆ ಬಳಿಕ ಗೊತ್ತಾಯಿತು. ಆದರೆ ದೂರುದಾರರ ಹೆಸರು ಹೇಳಲು ಪೊಲೀಸರು ನಿರಾಕರಿಸಿದ್ದಾರೆ. ಜಾಗದ ವಿಚಾರದಲ್ಲಿ ತಕರಾರಿರುವ ಬಗ್ಗೆ ಮಾಹಿತಿ ಇದ್ದು, ಈ ಹಿನ್ನೆಲೆಯಲ್ಲಿ ದುರುದ್ದೇಶದಿಂದ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಮುಂದೇನಾಗಬಹುದು ಎನ್ನುವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

