ಎಡಪದವು: ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಬಾಗಂತಕೋಡಿ ಎಂಬಲ್ಲಿನ ನಿವಾಸಿ ಪದ್ಮನಾಭ ಎಂಬವರ ಮನೆಯ ಮೇಲೆ ಪಕ್ಕದ ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಯನ್ನೇ ಖಾಲಿ ಮಾಡಿದ್ದಾರೆ.. ಮತ್ತಷ್ಟು ಕುಸಿತ ಉಂಟಾಗುತ್ತಿದ್ದು ಇದರಿಂದ ಡೊಂಬಯ್ಯ, ಬೂಬಣ್ಣ, ಮೋಹನ್ ಸೇರಿ ಹಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ನಿನ್ನೆ ಶಾಸಕ ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರದ ಭರವಸೆ ನೀಡಿದ್ದಾರೆ.
ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಪದ್ಮನಾಭ ಅವರು ಹಾಗೂ ಮನೆಯವರು ಮನೆಯಲ್ಲಿದ್ದಂತೆ ಪಕ್ಕದ ಬೃಹತ್ ಗುಡ್ಡ ಕುಸಿದು ಮನೆಗೆ ಬಿದ್ದಿದೆ. ಇದರಿಂದ ಅವರ ಮನೆಯ ಎರಡು ಗೋಡೆಗಳು ಸಂಪೂರ್ಣವಾಗಿ ಬಿರುಕುಬಿಟ್ಟಿದ್ದು, ಉಳಿದಂತೆ ಮನೆ ಜಖಂಗೊಂಡಿದೆ. ಪದ್ಮನಾಭ ಅವರ 13 ಸೆಂಟ್ಸ್ ಜಾಗ ಇಲ್ಲಿದ್ದು, ಇದರಲ್ಲಿ ಸ್ವಲ್ಪ ಜಾಗವನ್ನು ಸಾರ್ವಜನಿಕ ರಸ್ತೆಗೆ ಬಿಟ್ಟುಕೊಟ್ಟಿದ್ದರು. ಕಳೆದ ತಿಂಗಳಷ್ಟೇ ಪದ್ಮನಾಭ ಅವರ ಹಿರಿಯ ಪುತ್ರನಿಗೆ ಮದುವೆ ನಡೆದಿದ್ದು, ಮನೆಗೆ ಪೈಂಟ್ ಹೊಡೆದು, ಟೈಲ್ಸ್ ಹಾಕಿಸಿ ಸುಂದರಗೊಳಿಸಿದ್ದರು. ಅವರ ಮನೆಗೆ ಸುಮಾರು 10 ಲಕ್ಷ ರೂ.ಗಿಂತಲೂ ಅಧಿಕ ಖರ್ಚು ಮಾಡಿದ್ದರು. ಮನೆಯ ಬದಿಗೆ ಕಲ್ಲಿನಿಂದ ಕಂಪೌಂಡ್ ಕಟ್ಟಿದ್ದರು. ಆದರೆ ಇವೆಲ್ಲಾ ಭಾರೀ ಮಳೆಗೆ ನಷ್ಟಹೊಂದಿದೆ.
ಇದೀಗ ಮನೆಯನ್ನು ಬಿಟ್ಟು ಕೈಕಂಬದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ದಾರೆ. ಗುಡ್ಡ ಕುಸಿಯುತ್ತಲೇ ಸಾಗಿದ್ದು, ಮನೆಗೆ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಮೊನ್ನೆ ಪಂಚಾಯತ್ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭರತ್ ಭೇಟಿ:
ಶಾಸಕ ಭರತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಲ್ಲಿ ಮಾತನಾಡಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಮನೆಯ ಸುತ್ತಲಿನ ಕಲ್ಲುಮಣ್ಣು ತೆಗೆದು ಮನೆಯನ್ನು ಸುರಕ್ಷಿತವಾಗಿಡಲು ಸೂಚಿಸಲಾಗುವುದು. ಅಲ್ಲಿಯವರೆಗೆ ಮನೆಯಲ್ಲಿ ವಾಸಿಸದಂತೆ ಸೂಚಿಸಿದ್ದಾರೆ. ಬಳಿಕ ಅಪಾಯದಂಚಿನಲ್ಲಿರುವ ಉಳಿದ ಮನೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರೊಂದಿಗೆ ಚಂದ್ರಹಾಸ ನಾರಳ, ನೋಣಯ್ಯ ಕೋಟ್ಯಾನ್, ತಮ್ಮಯ್ಯ ಪೂಜಾರಿ, ಶ್ರೀನಿಧಿ ಮುಂತಾದವರು ಜೊತೆಗಿದ್ದರು.
