ವಾಮಂಜೂರು: ವಾಮಂಜೂರಿನ ಅಮೃತೇಶ್ವರ ದೇಗುಲದ ದ್ವಾರದ ಸಮೀಪದ ಕೆತ್ತಿಕಲ್ ಗುಡ್ಡ ಮತ್ತೆ ಕುಸಿಯುವ ಭೀತಿ ವ್ಯಕ್ತವಾಗಿದ್ದು, ಇದರ ಸಮೀಪದ ರಸ್ತೆಯಲ್ಲಿ ಬಿರುಕು ಹಾಗೂ ರಸ್ತೆ ಬದಿಯಲ್ಲಿ ಆಳವಾದ ತೂತು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸುಮಾರು 20 ವರ್ಷಗಳ ಮುಂಚೆ ಕೆತ್ತಿಕಲ್ ಗುಡ್ಡ ವಾಲಿಕೊಂಡು ಜಾರಿಬಿದ್ದಿದ್ದು, ಮಣ್ಣು ಕಲ್ಲುಗಳೆಲ್ಲಾ ಉರುಳಿದ್ದವು. ಇದೀಗ ಮತ್ತೆ ಕುಸಿತದ ಚಿನ್ಹೆಗಳು ಕಂಡುಬಂದಿರುವುದರಿಂದ ಆತಂಕ ವ್ಯಕ್ತವಾಗಿದೆ. 

ವಾಮಂಜೂರಿನ ಕೆತ್ತಿಕಲ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗಿದೆ. ಈ ಮಾರ್ಗವಾಗಿ ಮಂಗಳೂರಿನಿಂದ ಮೂಡಬಿದ್ರೆ, ಬಜ್ಪೆ, ಪೊಳಲಿ, ಕಾರ್ಕಳ, ಶಿವಮೊಗ್ಗ ಸೇರಿ ಹಲವಾರು ಕಡೆಗಳಿಗೆ ಸಾವಿರಾರು ವಾಹನಗಳು ಹಾದುಹೋಗುತ್ತದೆ. ಒಂದು ವೇಳೆ ಈ ರಸ್ತೆ ಕುಸಿದಿದ್ದೇ ಆದರೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದ್ದು, ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಬಹುದು. ರಸ್ತೆಯ ಅಂಚಿನಲ್ಲಿ ನೀರು ಹಾದುಹೋಗಲು ಪೈಪನ್ನು ಬಂದ್ ಮಾಡಿರುವುದರಿಂದ ಕುಸಿತದ ಚಿನ್ಹೆಗಳು ಕಾಣಿಸಲು ಕಾರಣ ಎನ್ನಲಾಗಿದೆ. ಈ ಮುಂಚೆಯೂ ಸಮೀಪದ ಗುಡ್ಡದಲ್ಲಿ ಮಣ್ಣು ಕುಸಿದುಬೀಳುತ್ತಲೇ ಬಂದಿತ್ತು. ಕೆಲವರು ಈ ಮಣ್ಣನ್ನು ಜೆಸಿಬಿಯಿಂದ ತೆಗೆದುಕೊಂಡು ಹೋಗಿದ್ದರು. ಆದರೆ ಈ ಬಗ್ಗೆ ಯಾರೂ ಲಕ್ಷ್ಯ ವಹಿಸುತ್ತಿರಲಿಲ್ಲ. 

20 ವರ್ಷಗಳ ಮುಂಚೆ ಇಲ್ಲಿ ಭಾರೀ ಕುಸಿತ ಕಂಡು ಸಂಚಾರ ವ್ಯವಸ್ಥೆಯನ್ನು ಬದಲಿಸಿ ಕಾವೂರು ಬಜ್ಪೆ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಯಾವುದೇ ಅಪಾಯ ಕಾಣಿಸದ ಕಾರಣ ಮತ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಅಲ್ಲಿಂದ ಇಲ್ಲಿಯ ತನಕ ಸಂಚಾರ ನಡೆಯುತ್ತಲೇ ಸಾಗಿದೆ. ಈಗ ಕುಸಿತದ ಚಿನ್ಹೆಗಳು ಕಂಡುಬಂದ ನಂತರವೂ ಸಂಚಾರದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. ಮಳೆ ಇದೇ ರೀತಿ ಸರಾಗವಾಗಿ ಬಂದಿದ್ದೇ ಆದರೆ, ಘನವಾಹನಗಳ ಸಂಚಾರ ಇದೇ ರೀತಿ ಸಾಗಿದರೆ ಗುಡ್ಡ ಕುಸಿಯಬಹುದು ಎನ್ನುವುದು ಸಾರ್ವಜನಿಕರ ಆತಂಕ. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳುವಂತೆ ಆಗ್ರಹ ಕೇಳಿಬಂದಿದೆ.
