ಬಂಟ್ವಾಳ: ಮುಲಾರಪಟ್ನ ಸೇತುವೆ ಕುಸಿತ ಬಂಟ್ವಾಳ-ಮಂಗಳೂರು ಸಂಪರ್ಕ ಸ್ಥಗಿತ, ತಪ್ಪಿದ ಭಾರೀ ಅನಾಹುತ
ಕೈಕಂಬ:ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮ ಮತ್ತು ಮಂಗಳೂರು ತಾಲ್ಲೂಕಿನ ಮುತ್ತೂರು ಹಾಗೂ ಕುಳವೂರು ಗ್ರಾಮಗಳನ್ನು ಸಂಪರ್ಕಿಸುವ ಈ ಎರಡು ತಾಲ್ಲೂಕಿನ ಗಡಿ ಭಾಗದಲ್ಲಿಸುವ ಸುಮಾರು 40 ವರ್ಷ ಹಳೆಯ ಫಲ್ಗುಣಿ ನದಿ ಸೇತುವೆ ಸೋಮವಾರ ಸಂಜೆ ದಿಢೀರನೆ ಕುಸಿದು ಬಿದ್ದು ಸಂಪರ್ಕ ಸ್ಥಗಿತಗೊಂಡಿದೆ.
ಸುಮಾರು 100 ಮೀ. ಉದ್ದ ಹೊಂದಿರುವ ಈ ಸೇತುವೆಯಡಿ ಒಟ್ಟು ಒಂಭತ್ತು ಆಧಾರಸ್ತಂಭಗಳಿದ್ದು, ಸೇತುವೆಯ ಒಂದು ಬದಿ ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದಲ್ಲಿದ್ದರೆ, ಇನ್ನೊಂದು ಭಾಗ ಮಂಗಳೂರು ತಾಲ್ಲೂಕಿನ ಮುತ್ತೂರು ಭಾಗದಲ್ಲಿದೆ. ಸೋಮವಾರ ಸಂಜೆ ಸುಮಾರು ಏಳು ಗಂಟೆಗೆ ಮಂಗಳೂರು ತಾಲ್ಲೂಕು ವ್ಯಾಪ್ತಿಯ ಮುತ್ತೂರು ಭಾಗಕ್ಕೆ ಹತ್ತಿರದಲ್ಲೇ ಮೂರನೇ ಆಧಾರಸ್ತಂಭ ಕುಸಿದಿದೆ. ಇದೇ ವೇಳೆ ಭಾರೀ ಸದ್ದಿನೊಂದಿಗೆ ಸೇತುವೆ ಮೇಲಿನ ತಡೆಗೋಡೆ ಸಹಿತ ಕಾಂಕ್ರೀಟು ರಸ್ತೆ ತುಂಡಾಗಿ ನದಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಯಾರೂ ಇರಲಿಲ್ಲ. ಇಲ್ಲಿನ ಮುಲ್ಲಾರಪಟ್ನ ಜುಮ್ಮಾ ಮಸೀದಿ ಬಳಿ ಪ್ರತಿ ದಿನ ಸಂಜೆ ಸೇತುವೆ ಮೇಲೆ ಹಲವಾರು ಮಂದಿ ಯುವಕರು ಇರುತ್ತಿದ್ದರು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ.ಆಶ್ರಫ್ ಪ್ರತಿಕ್ರಿಯಿಸಿದ್ದಾರೆ.
ಸುಮಾರು 40 ವರ್ಷ ಹಳೆ ಸೇತುವೆಯಾಗಿದ್ದರೂ ಪ್ರತಿದಿನ ಬಂಟ್ವಾಳ, ಮೂಡುಬಿದ್ರೆ, ಬಿ.ಸಿ.ರೋಡು ಕಡೆಯಿಂದ ಕಟೀಲು, ಪೊಳಲಿ, ಗುರುಪುರ, ಕುಪ್ಪೆಪದವು, ಕೈಕಂಬ, ಎಡಪದವು, ಸುರತ್ಕಲ್ ಕಡೆಗೆ 30ಕ್ಕೂ ಮಿಕ್ಕಿ ಬಾರಿ ಖಾಸಗಿ ಬಸ್ ಓಡಾಟ ನಡೆಸುತ್ತಿದೆ. ದಿನವೊಂದಕ್ಕೆ ನೂರಕ್ಕೂ ಮಿಕ್ಕಿ ಕಾರು, ಬೈಕ್,ರಿಕ್ಷಾ, ಲಾರಿ ಮತ್ತಿತರ ವಾಹನ ಓಡಾಟ ನಡೆಸುತ್ತಿದ್ದು, ಸೇತುವೆ ಕುಸಿತ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಿರುವುದು ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ ಎನ್ನುತ್ತಾರೆ ಭಯಭೀತಗೊಂಡ ಇಲ್ಲಿನ ಸ್ಥಳೀಯರು.
ಅಕ್ರಮ ಮರಳುಗಾರಿಕೆ ಕಾರಣ…?
ಕಳೆದ ಹಲವಾರು ವರ್ಷಗಳಿಂದ ಈ ಸೇತುವೆ ಕೆಳಭಾಗದಲ್ಲಿ ನಿಯಮ ಮೀರಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ಕಳೆದ ಒಂದೂವರೆ ವರ್ಷಗಳ ಹಿಂದೆ ಪೊಲೀಸರು ಈ ಬಗ್ಗೆ ದಾಳಿ ನಡೆಸಿದಾಗ ಕಾರ್ಮಿಕರೊಬ್ಬರು ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದ್ದರು. ಕಳೆದ ಹಲವು ವರ್ಷಗಳಿಂದ ಇಲ್ಲಿನ ಮುಲಾರಪಟ್ನ ಮಾತ್ರವಲ್ಲದೆ ನದಿಯ ಕೆಳ ಭಾಗದ ಮುತ್ತೂರು, ಪೊಳಲಿ, ಅಡ್ಡೂರು, ಗುರುಪುರ ಕೂಳೂರು ಮತ್ತಿತರ ಕಡೆಗಳಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ದಂಧೆ ನಡೆದಿದ್ದು, ಇದೀಗ ಸೇತುವೆ ಕುಸಿತಕ್ಕೆ ಪರೋಕ್ಷವಾಗಿ ಕಾರಣವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಕಳೆದ ವರ್ಷ ಸ್ನಾನಕ್ಕೆ ಇಳಿದಿದ್ದ ಬಾಲಕರು ಕೂಡಾ ಸಾವನ್ನಪ್ಪಿದ್ದು, ಇದಕ್ಕೂ ಮೊದಲು ಶಾರದೆ ವಿಗ್ರಹ ಜಲಸ್ತಂಭನ ವೇಳೆ ನಾಟಕ ಕಲಾವಿದರೊಬ್ಬರು ನೀರು ಪಾಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತೂಗುಸೇತುವೆ
ಕಳೆದ ಎರಡೂವೆರ ವರ್ಷಗಳ ಹಿಂದೆಯಷ್ಟೇ ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮ ಮತ್ತು ಮಂಗಳೂರು ತಾಲ್ಲೂಕಿನ ಮುತ್ತೂರು ಗ್ರಾಮ ಸಂಪರ್ಕಿಸುವ ತೂಗು ಸೇತುವೆ ನಿರ್ಮಾಣಗೊಂಡಿದ್ದು, ಜನರಿಗೆ ತುರ್ತು ಸಂಚರಿಸಲು ಸಹಕಾರಿಯಾಗಿದೆ.
ವಾಹನ ಸಂಚಾರ ಸ್ಥಗಿತ:
ಇಲ್ಲಿನ ಸೇತುವೆ ಕುಸಿತದಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದೀಗ ಬಂಟ್ವಾಳ-ಸಿದ್ಧಕಟ್ಟೆ -ಸಂಗಬೆಟ್ಟು ಪುಚ್ಚಮೊಗರು ಸೇತುವೆ ಮೂಲಕ ಮೂಡುಬಿದ್ರೆ ಮೂಲಕ 25ಕಿ.ಮೀ.ಕ್ರಮಿಸುವಂತಾಗಿದೆ.
ಇನ್ನೊಂದೆಡೆ ಬಂಟ್ವಾಳ -ಸೋರ್ಣಾಡು-ಕುರಿಯಾಳ -ಸಾಣೂರು ಪದವು-ಪೊಳಲಿ-ಕೈಕಂಬ ಮಾರ್ಗವಾಗಿ ಕಟೀಲು ಕಡೆಗೆ ಸಂಚರಿಸುವಂತಾಗಿದೆ. ಇಲ್ಲದಿದ್ದಲ್ಲಿ ಬಂಟ್ವಾಳ-ಬಿ.ಸಿ.ರೋಡು-ಪೊಳಲಿ-ಕೈಕಂಬ ಮೂಲಕ ಕಟೀಲು, ಎಡಪದವು, ಸುರತ್ಕಲ್ ಮಂಗಳೂರು ಸಂಪರ್ಕಿಸಬೇಕಿದೆ.
ಸ್ಥಳಕ್ಕೆ ಮುಖಂಡರ ಭೇಟಿ:
ಮುಲಾರಪಟ್ನ ಸೇತುವೆ ಕುಸಿತ ವಿಷಯ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಉತ್ತತರ ಶಾಸಕ ಡಾ. ಭರತ್ ಶೆಟ್ಟಿ, ತಾಶೀಲ್ದಾರ್ ಜಿ.ಸಂತೋಷ್, ಕಂದಾಯ ನಿರೀಕ್ಷಕ ನವೀನ್, ಗ್ರಾಮಕರಣಿಕರಾದ ಸೀತಾರಾಮ, ಅಮೃತಾಂಶು, ಜನಾರ್ದನ, ಗ್ರಾಮ ಸಹಾಯಕ ಗೋಪಾಲ, ಶಿವಪ್ರಸಾದ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಡೆದಾಡಲು ತೂಗುಸೇತುವೆ:
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ ಭಟ್ ಪ್ರತಿಕ್ರಿಯಿಸಿ, ಇಲ್ಲಿನ ಮುತ್ತೂರು-ನೋಣಾಲು ಶಾಲಾ ಮಕ್ಕಳಿಗೆ ಸಂಚರಿಸಲು ಇಲ್ಲಿನ ತೂಗುಸೇತುವೆಯಲ್ಲಿ ಅವಕಾಶ ಒದಗಿಸಲಾಗುತ್ತಿದ್ದು, ಇದಕ್ಕಾಗಿ ಮಂಗಳವಾರ ಬೆಳಿಗ್ಗೆಯಿಂದಲೇ ಎರಡೂ ಬದಿ ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಉಳಿದಂತೆ ವಾಹನ ಸಂಚಾರಕ್ಕೆ ಮುಂದಿನ ಒಕ್ಟೋಬರ್ ತಿಂಗಳ ಬಳಿಕ ಹೊಸ ಸೇತುವೆ ನಿರ್ಮಾಣಗೊಂಡರೆ ಮಾತ್ರ ಸಾಧ್ಯ ಎಂದಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ನೇತೃತ್ವದ ಪೊಲೀಸರು ಮತ್ತು ಬಜ್ಪೆ ಪೊಲೀಸರು ಸೇತುವೆಗೆ ಎರಡೂ ಬದಿ ತಡೆಬೇಲಿ ಅಳವಡಿಸಿ ವಾಹನಗಳಿಗೆ ಸಂಚರಿಸಲು ಪರ್ಯಾಯ ಮಾರ್ಗ ಸೂಚಿಸಿರುವುದಾಗಿ ತಿಳಿಸಿದ್ದಾರೆ.