ಕೈಕಂಬ : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗುರುಪುರ ಅನುದಾನಿತ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಪುನರಾರಂಭ ಕುರಿತು ಜೂನ್ 24ರಂದು ಗುರುಪುರ ಜಂಗಮ ಮಠದಲ್ಲಿ ನಡೆದ ಸಭೆಯಲ್ಲಿ ಜುಲೈ 8ರಂದು 9.30ಕ್ಕೆ ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಹಳೆ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಹಾಗೂ ಮಕ್ಕಳ ಪಾಲಕರ ಸಹಿತ ನಾಗರಿಕ ಸಭೆ ನಡೆಸಿ ಮುಂದಿನ ಕ್ರಮ ಜರುಗಿಸಲು ನಿರ್ಧರಿಸಲಾಯಿತು.
ಜಂಗಮ ಮಠದ ಶ್ರೀ ರುದ್ರಮುನಿ ಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಿದರು. ತಾಲೂಕು ಪಂಚಾಯತ್ ಸದಸ್ಯ ಸಚಿನ್ ಅಡಪ, ಶಾಲೆ ಮುಚ್ಚಲಾದ ಹಾಗೂ ಇಲಾಖಾ ಮಟ್ಟದಲ್ಲಿ ನಡೆಸಲಾದ ಕೆಲಸಗಳ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು.
ಶಾಲೆ ಪುನರಾರಾಂಭಿಸುವುದು ನಮ್ಮ ಉದ್ದೇಶವಾಗಿದ್ದು, ಮೇಲಧಿಕಾರಿಗಳು ಮತ್ತು ಶಿಕ್ಷಣ ಸಚಿವರ ಬಳಿ ನಿಯೋಗ ಕೊಂಡೊಯ್ದು ಶಾಲೆ ಉಳಿಸಲು ಪ್ರಯತ್ನಿಸಲಾಗುವುದು ಎಂದು ಅಡಪ ಮತ್ತು ಸಭೆಯಲ್ಲಿದ್ದ ಉಮೇಶ್ ಪ್ರಭು ಹೇಳಿದರು. ಈ ಸಂದರ್ಭದಲ್ಲಿ ಕೆಲವು ಹಳೆ ವಿದ್ಯಾರ್ಥಿಗಳು ಸಲಹೆ-ಸೂಚನೆ ನೀಡಿದರು. ಸಭೆಯಲ್ಲಿ ಬಿಜೆಪಿ ಸ್ಥಳೀಯ ಮುಖಂಡ ರಾಜೇಶ ಅಮೀನ್ ಹಾಗೂ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ವಾಗತಿಸಿದ ಲಕ್ಷ್ಮಣ್ ಶೆಟ್ಟಿಗಾರ ವಂದಿಸಿದರು.
