ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಇದರ ಸಮಿತಿ ವಿಜ್ಞಾಪನಾ ಪತ್ರವನ್ನು ರವಿವಾರ ವೈದ್ಯನಾಥ ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯ ಪದ್ಮನಾಭ ಕೋಟ್ಯಾನ್ ಮಾತನಾಡಿ, ಜೀರ್ಣೋದ್ಧಾರ ಕೆಲಸ ನಿರ್ವಿಘ್ನವಾಗಿ ನಡೆಯುತ್ತಿದ್ದು, ಸಂತೋಷದ ವಿಚಾರ. ಇದು ನಮಗೆ ಸಿಕ್ಕಿದ ಭಾಗ್ಯವೂ ಆಗಿದೆ. ದೇವರ-ದೈವಗಳಿಗೆ ಸಹಾಯ ಮಾಡುವುದು ನಮ್ಮ ಗುಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಭಂಡಾರಮನೆ ದಾಮೋದರ ನಿಸರ್ಗ ಮಾತನಾಡಿ, ನಿರ್ಮಲ ಮನಸ್ಸಿನಿಂದ ಕೆಲಸ ಮಾಡಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂಬುದಕ್ಕೆ ಈ ದೈವಸ್ಥಾನದಲ್ಲಿ ಈವರೆಗೆ ನಡೆದಿರುವ ಕೆಲಸಗಳೇ ಸಾಕ್ಷ್ಯಿ. ಇದರಲ್ಲಿ ಊರಿನ ಭಕ್ತರ ಒಗ್ಗೂಡುವಿಕೆಯೂ ಪ್ರಧಾನ ಪಾತ್ರ ವಹಿಸಿದೆ. ಮೂರು ಗ್ರಾಮಕ್ಕೆ ಕಳಸಪ್ರಾಯ ದೈವಸ್ಥಾನವಾಗಬೇಕೆಂಬುದು ನನ್ನ ಆಸೆ ಎಂದು ಹೇಳಿದರು.
ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ರೈ ಮಾತನಾಡಿ, ಇದು ದೈವದ ಸಂಕಲ್ಪವಾಗಿದ್ದು, ಊರವರ ಸೌಭಾಗ್ಯವಾಗಿದೆ. ವೈದ್ಯನಾಥ ಎಲ್ಲರಿಂದಲೂ ಕೆಲಸ ಮಾಡಿಸುತ್ತಿದ್ದಾನೆ. ಉತ್ತಮ ಕೆಲಸಗಳಿಂದ ನಮ್ಮ ಜನ್ಮ ಪಾವನವಾಗುತ್ತದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಪ್ರಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೈವ ಪಾತ್ರಿಗಳಾದ ವಕೀಲ ಚಂದ್ರಹಾಸ ಪೂಜಾರಿ ಕೌಡೂರು, ತನಿಯಪ್ಪ ಪೂಜಾರಿ ಹಾಗೂ ಯತಿರಾಜ ಶೆಟ್ಟಿ, ತಂತ್ರಿ ವಾಸುದೇವ ಭಟ್, ತಾಪಂ ಸದಸ್ಯ ಸಚಿನ್ ಅಡಪ, ಪ್ರವೀರ್ಣ ಶೇಟ್ಟಿ ಬೆಳ್ಳಿಬೆಟ್ಟು, ಗ್ರಾಪಂ ಉಪಾಧ್ಯಕ್ಷ ಉದಯ ಭಟ್, ಪುರಂದರ ಮಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸದಾನಂದ ಸಫಲಿಗ, ಸುಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಜತೆ ಕಾರ್ಯದರ್ಶಿ ಯಶವಂತ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಿಟ್ಟಣ್ಣ ರೈ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವೈದ್ಯನಾಥನ ಭಂಡಾರದ ಮನೆಯಲ್ಲಿ ದೈವಗಳಿಗೆ `ವಾಮಂಚಕಚ್ಚಾಯ’ ನಡೆಯಿತು.





