gur-june-17-nalin

ಗುರುಪುರ: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿಂದುತ್ವ ಆಧಾರದಲ್ಲಿ ಗೆಲುವಾಗಿದ್ದು, ಈ ಗೆಲುವನ್ನು ಹತ್ಯೆಗೀಡಾದ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹಾಗೂ ದೀಪಕ್ ರಾವ್ ಅವರ ತ್ಯಾಗ, ಬಲಿದಾನಕ್ಕೆ ಸಮರ್ಪಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ವೈದ್ಯನಾಥ ಸಭಾವನದಲ್ಲಿ ಬಿಜೆಪಿ ಗುರುಪುರ ಮಹಾಶಕ್ತಿ ಕೇಂದ್ರದ ವತಿಯಿಂದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ.ವೈ ಹಾಗೂ ಕಾರ್ಯಕರ್ತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯರ ಹಿಂದು ಸಮಾಜದ ಹೊಡೆದಾಳುವ ನೀತಿಯ ವಿರುದ್ಧ ರಾಜ್ಯದ ಜನತೆ ಹಿಂದು ವಿಚಾರಧಾರೆಯಲ್ಲಿ ಬಿಜೆಪಿಗೆ ಸ್ವಾಭಿಮಾನದಿಂದ ಆಶೀರ್ವಾದ ಮಾಡಿದ್ದಾರೆ ಎಂದ ಅವರು, ಈ ಕ್ಷೇತ್ರವನ್ನು ಭರತ್ ಶೆಟ್ಟಿ ಅವರು ಅಭಿವೃದ್ಧಿಪಡಿಸಿ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಿಸಲಿದ್ದು, ಅಭಿವೃದ್ಧಿಯ ಚಿಂತನೆಗೊಳಗೊಂಡ  ಕಾರ್ಯಕ್ರಮಗಳನ್ನು ರೂಪಿಸಲಿದ್ದಾರೆ ಎಂದು ನುಡಿದರು.

ಈ ಕ್ಷೇತ್ರದಲ್ಲಿ ರಮಾನಾಥ ರೈ ಶಾಸಕರಾಗಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಸಿನ ದಬ್ಬಾಳಿಕೆಯನ್ನು ಎದುರಿಸಬೇಕಾಗಿತ್ತು. ಆದರೆ  ಇಂದು ಕಾಂಗ್ರೆಸ್ ಮುಕ್ತ ಗುರುಪುರ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಕಳ ಹಾಗೂ ಕುಲಶೇಖರ ರಸ್ತೆ ಮುಂದಿನ ಒಂದುವರೆ ವರ್ಷಗಳಲ್ಲಿ ಚತುಷ್ಪಥ ರಸ್ತೆಯಾಗಿ ಮಾರ್ಪಾಡಲಿದೆ. ಅಲ್ಲದೆ, ಬಿ.ಸಿ.ರೋಡ್ ನಿಂದ ಕೈಕಂಬ, ಪೊಳಲಿಯಾಗಿ ಕಟೀಲಿಗೆ ಹಾದು ಹೋಗುವ ಚತುಷ್ಪಥ ರಸ್ತೆಗೆ ಕೇಂದ್ರ ಸರಕಾರ ಅಂಕಿತ ಹಾಕಿದ್ದು, ಈ ವರ್ಷದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇನ್ನೂ ಶಿಥಿಲಾವಸ್ಥೆಯಲ್ಲಿರುವ ಸ್ಥಳೀಯ ಗುರುಪುರ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಭರತ್ ಶೆಟ್ಟಿ.ವೈ. ಮಾತನಾಡಿ, ಕಾರ್ಯರ್ತರ ಆಶೀರ್ವಾದದಿಂದ ಈ ಕ್ಷೇತ್ರದಲ್ಲಿ ನಾನು ಶಾಸಕನಾಗಲು ಸಾಧ್ಯವಾಗಿದೆ. ಕಾರ್ಯಕರ್ತರು ನನಗೆ ಹಲವಾರು ಜವಾಬಾರಿಗಳನ್ನು ನೀಡಿದ್ದು, ಅದರಂತೆ ನಡೆಯುತ್ತೇನೆ. ನಿಮ್ಮ ಆಸೆ, ಆಕಾಂಕ್ಷೆಗಳಿಗೆ ಸ್ಪಂದಿಸುವ ಶಾಸಕನಾಗಿ ಹೊರಹೊಮ್ಮುತ್ತೇನೆ. ನಿಮ್ಮ ಭಾಗದಲ್ಲಿ ನಿರೀಕ್ಷಿಸುವ ಮಟ್ಟದಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ದೇಶಕ್ಕೆ ನರೇಂದ್ರ ಮೋದಿಯವರ ಆಡಳಿತ ಅವಶ್ಯಕತೆಯಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಇನ್ನಷ್ಟು ಶ್ರಮವಹಿಸಬೇಕು ಎಂದು ಮನವಿ ಮಾಡಿದರು.

ವಿ.ಹಿಂ.ಪ.ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಈ ಬಾರಿ ನಡೆದ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಸಂಘಪರಿವಾರ ಎಲ್ಲಾ ಸವಾಲುಗಳನ್ನು ಎದುರಿಸಿ ಬಿಜೆಪಿಗೆ ಬೆಂಬಲಿಸಿದ್ದು, 2019ರಲ್ಲಿ ನಡೆಯುವ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ನೀಡುವ ಜವಾಬ್ದಾರಿಗಳನ್ನು ನಾವು ಪರಿಪೂರ್ಣವಾಗಿ ಈಡೇರಿಸಲು ಸಿದ್ಧ ಎಂದು ಹೇಳಿದರು.

gur-june-17-bharath shetty-4

20180617_133905

ಈ ವೇಳೆ ಗುರುಪುರ ಶಕ್ತಿ ಕೇಂದ್ರದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ಭರತ್ ಶೆಟ್ಟಿ.ವೈ ಹಾಗೂ ಬಿಜೆಪಿ ಪರಾಭವ ಅಭ್ಯರ್ಥಿ ಸಂತೋಶ್ ಶೆಟ್ಟಿ ಬೋಳಿಯಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗುರುಪುರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಿವರಾಜ್ ನಾರ್ಲ, ಜಿ.ಪಂ. ಸದಸ್ಯ ಜನಾರ್ದನ ಗೌಡ ಹಾಗೂ ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಪೂಜಾ ಪೈ ಮಾತನಾಡಿದರು. ಉ.ವಿಧಾನ ಮಂಡಲದ ರೈತ ಮೋರ್ಚಾ ಅಧ್ಯಕ್ಷ ರೋಕೀಶ್ ಶೆಟ್ಟಿ, ಗುರುಪುರ ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ದೋಣಿಂಜೆಗುತ್ತು ಪ್ರಮೋದ್ ರೈ, ಉತ್ತರ ಮಂಡಲ ವಿಧಾನ ಸಭಾ ಕ್ಷೇತ್ರದ ಶೋಧನ್ ಬಂಗೇರಾ, ಕಂದಾವರ ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ್ ಕೊಲಂಬೆ, ಗುರುಪುರ ಗಾಮ ಸಮಿತಿ ಅಧ್ಯಕ್ಷ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ಅಮೃತ ಪಾಲ್ ಡಿಸೋಜಾ ಸ್ವಾಗತಿಸಿ, ಸುರೇಶ್ ಮಾನಯ್ ವಂದಿಸಿದರು. ಮಧುರಾಜ್ ಗುರುಪುರ ಕಾರ್ಯಕ್ರಮವನ್ನು ನಿರೂಪಿಸಿದರು.

gur-june-17-bharath shetty-1

 

 

 

By suddi9

Leave a Reply

Your email address will not be published. Required fields are marked *