ಕೈಕಂಬ: ಒಂದು ಬಾಡಿಗೆ ಮನೆ ಬಿಟ್ಟರೆ ಅವರಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲ. ಸ್ವಂತ ಮನೆ ಕಟ್ಟಲು ಜಾಗಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು ಅದು ಕೂಡ ದೊರಕ್ಕಿಲ್ಲ. ಇಬ್ಬರು ಮಕ್ಕಳಷ್ಟೇ ಆಸ್ತಿ. ಇವರಿಗೆ ವಿದ್ಯೆ ಕಲಿಸಿ ಸುಂದರ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಆ ನತದೃಷ್ಟ ಮಹಿಳೆಗೆ ಇದ್ದಕ್ಕಿದ್ದಂತೆ ಬರಸಿಡಿಲು ಬಡಿದಂತೆ ಒಂದು ಘಟನೆ ಸಂಭವಿಸಿತು.
ಹೌದು ಇದು ಗುರುಪುರ ಕೈಕಂಬ ಸಮೀಪದ ಕಂದಾವರ ಪಂಚಾಯತ್ ವ್ಯಾಪ್ತಿಯ ಮೂಡುಕರೆಯ ಚಂದ್ರಾವತಿ ಎಂಬ ಬಡ ಮಹಿಳೆಯ ಗೋಳು. ಇತ್ತೀಚೆಗೆ ಇವರಿದ್ದ ಬಾಡಿಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಿಂದ ಉಟ್ಟ ಬಟ್ಟೆಯೊಂದನ್ನು ಬಿಟ್ಟು ಎಲ್ಲವನ್ನೂ ಕಳೆದುಕೊಂಡು ಮುಂದೇನು ಎಂದು ಕಣ್ಣೀರು ಇಡುತ್ತಾರೆ.
ಚಂದ್ರಾವತಿ ಅವರು ಮೂಡುಕರೆಯಲ್ಲಿ ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಇತ್ತೀಚಿನ ರಾತ್ರಿ ಬಾಡಿಗೆ ಮನೆಗೆ ಬಾಗಿಲು ಹಾಕಿ ತೆರಳಿದ್ದ ಚಂದ್ರಾವತಿ ಅವರ ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಆಕಸ್ಮಿಕ ಕಾಣಿಸಿಕೊಂಡು ಇದ್ದ ಅಲ್ಪ-ಸ್ವಲ್ಪ ಆಸ್ತಿಯನ್ನೂ ಆಹುತಿ ಪಡೆದುಕೊಂಡಿದೆ. ಇವರ ಮಗಳು ರಮ್ಯಾ ಹಾಗೂ ಮಗ ರಕ್ಷಿತ್ ಮನೆಯಲ್ಲಿ ಇರಲಿಲ್ಲ. ಮಾಹಿತಿ ಪಡೆದ ಚಂದ್ರಾವತಿ ಅವರು ಅಯ್ಯಯ್ಯೋ ಎಂಬ ಬೊಬ್ಬೆಗೆ ಊರವರೆಲ್ಲಾ ಬಂದು ಬೆಂಕಿ ನಂದಿಸಿದರೂ ಮನೆಯೊಳಗಿದ್ದ ಎಲ್ಲವೂ ಅಷ್ಟೊತ್ತಾಗಲೇ ಭಸ್ಮವಾಗಿತ್ತು.
ಚಿನ್ನ, ಸರ್ಟಿಫಿಕೆಟ್, ಬಟ್ಟೆ ಎಲ್ಲವೂ ಧಗಧಗ: ಚಂದ್ರಾವತಿಯವರು ಮಗಳಿಗಾಗಿ ಮಾಡಿಸಿಟ್ಟಿದ್ದ ಸುಮಾರು ಎರಡು ಪವನ್ ಚಿನ್ನ, ಮಗಳ ಡಿಗ್ರಿ ಸೆಮಿಸ್ಟರ್ ಸರ್ಟಿಫಿಕೆಟ್, ಬಟ್ಟೆಬರೆ, ಮನೆ ಸಾಮಗ್ರಿ, ಕಪಾಟು, ಅಲ್ಪಸ್ವಲ್ಪ ಹಣ ಸೇರಿ ಎಲ್ಲವೂ ಬೆಂಕಿಯಲ್ಲಿ ದಹಿಸಿಹೋಗಿದೆ. ಪುಣ್ಯಕ್ಕೆ ಮನೆಯ ಪಕ್ಕಾಸುಗಳಿಗೆ ಬೆಂಕಿ ಹತ್ತಿಕೊಳ್ಳಲಿಲ್ಲ. ಇದೀಗ ಎಲ್ಲವನ್ನೂ ಕಳೆದುಕೊಂಡ ಚಂದ್ರಾವತಿ ಅವರು ಪಕ್ಕದ ಶೆಟ್ಟರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಪತಿಯನ್ನು ಕಳೆದುಕೊಂಡಿದ್ದ ಚಂದ್ರಾವತಿಯವರು ಮೂಡಬಿದ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟು ಕಷ್ಟದಲ್ಲಿದ್ದರೂ ಮಗಳನ್ನು ಡಿಗ್ರಿ ಓದಿಸಿದರೆ, ಮಗನನ್ನು ಐಟಿಐ ಓದಿಸುತ್ತಿದ್ದರು. ಸ್ವಂತ ಜಾಗಕ್ಕಾಗಿ ಪಂಚಾಯತ್ಗೆ ಅರ್ಜಿ ಸಲ್ಲಿಸಿದರೂ ನಿವೇಶನ ಸಿಕ್ಕಿಲ್ಲ. ಹಕ್ಕುಪತ್ರದ ಮೂಲಕ ನಿವೇಶನ ಸಿಗಬಹುದೆಂದು ಸಾಕಷ್ಟು ವರ್ಷ ಪ್ರಯತ್ನಿಸಿದರೂ ಅದು ದಕ್ಕಲಿಲ್ಲ.
ಕೌಡೂರಿನಲ್ಲಿ ಸುಮಾರು 14 ಎಕ್ರೆ ಸರಕಾರಿ ಭೂಮಿ ಇದ್ದರೂ ಐದು ಸೆಂಟ್ಸ್ ಜಾಗ ಕೊಡಿಸಲೂ ಪಂಚಾಯತ್ನವರಿಗೆ ಸಾಧ್ಯವಾಗಲಿಲ್ಲ. ಇದರ ನಡುವೆ ಬಾಡಿಗೆ ಮನೆಗೆ ಬೆಂಕಿ ಹತ್ತಿಕೊಂಡು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಕಂದಾವರ ಪಂಚಾಯತ್ ವತಿಯಿಂದ ಐದು ಸಾವಿರ ಪರಿಹಾರ ಪರಿಹಾರ ಸಿಕ್ಕಿದೆ.
ಶಾಸಕ ಭರತ್ ಶೆಟ್ಟಿ ಭೇಟಿ: ಚಂದ್ರವತಿಯವರ ಕಷ್ಟವನ್ನು ಅರಿತು ಸ್ವತಃ ಭರತ್ ಶೆಟ್ಟಿಯವರು ಭೇಟಿ ನೀಡಿ ಧನ ಸಹಾಯ ನೀಡಿದ್ದಾರೆ. ಅವರಿಗೆ ಸ್ವಂತ ಜಾಗವಿಲ್ಲದ ಕಾರಣ ಸರಕಾರದ ಯಾವ ಸವಲತ್ತೂ ಸಿಕ್ಕಿಲ್ಲ. ಹಕ್ಕುಪತ್ರದ ಅಡಿಯಲ್ಲಿ ಮನೆ ಕೊಡಿಸಲು ಪ್ರಯತ್ನ ಪಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಬಗ್ಗೆ ಪಂಚಾಯತ್ನವರಿಗೂ ಸೂಚಿಸಿದ್ದಾರೆ.
ಸಂಘಟನೆಯ ನೆರವು ಅಗತ್ಯ: ಎಲ್ಲವನ್ನೂ ಕಳೆದುಕೊಂಡು ಕಣ್ಣೀರಿಡುತ್ತಿರುವ ಬಿಲ್ಲವ ಸಮುದಾಯದ ಚಂದ್ರವತಿಯವರ ಸಂಸಾರ ನೆಮ್ಮದಿಯನ್ನು ಕಾಣಬೇಕಾದರೆ ಸಂಘಟನೆಯವರ ನೆರವೂ ಅಗತ್ಯವಾಗಿದೆ. ಇದರ ಜೊತೆಗೆ ಅವರಿಗೆ ಸರಕಾರದಿಂದ ಸಿಗುವ ಸವಲತ್ತು ಸಿಗಬೇಕಾದರೆ ನಿವೇಶನವೂ ದಕ್ಕಬೇಕಾಗಿದೆ. ಸ್ವಂತ ನಿವೇಶನದಲ್ಲಿ ಪುಟ್ಟದೊಂದು ಮನೆಕಟ್ಟಿ, ಸರಕಾರದಿಂದ ಸಿಗುವ ಸವಲತ್ತು ಪಡೆದುಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಲು ನೆರವುಗಾಗಿ ಹಾತೊರೆಯುತ್ತಿದ್ದಾರೆ.


