ಗುರುಪುರ: ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ದಿಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ, ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಹಾಗೂ ಗುರುಪುರದ ಶ್ರೀ ಪದ್ಮಸಾಯಿ ನ್ಯಾಯ ವಿಜ್ಞಾನ ಶಿಕ್ಷಣ ಚಿಕಿತ್ಸಾ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜಿನ ಸಭಾಗೃಹದಲ್ಲಿ ಜೂ.21ರವರೆಗೆ ನಡೆಯುವ ಉಚಿತ ಯೋಗ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಈ ವೇಳೆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಯೋಗ ಭಾರತೀಯ ಕಲೆ. ಇದು ನಮ್ಮ ಸಂಸ್ಕೃತಿ. ಇದಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಹಳ್ಳಿ ಮೂಲೆಗಳಿಗೂ ಯೋಗ ತಪುಲಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದಕ್ಕೆ ಸರ್ಕಾರಿ ಅನುದಾನ ಸಿಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ವಾಸುದೇವ ಕಾಮತ್, ಯೋಗದ ಲಾಭ ತಕ್ಷಣ ಸಿಗುವುದಿಲ್ಲ. ಕ್ರಮ ಬದ್ಧ ಅಭ್ಯಾಸದಿಂದ ಕ್ರಮೇಣ ಇದರ ಲಾಭ ಸಿಗುತ್ತದೆ. ಮಾನಸಿಕ ಆರೋಗ್ಯಕ್ಕೆ ಯೋಗ ಸಿದ್ಧ ಔಷಧ. ಗ್ಯಾಸ್ಲೆಸ್ ಸೋಡಾದಂತಾಗದೆ ಲವಲವಿಕೆಯ ಜೀವನಕ್ಕೆ ಯೋಗ ಅತ್ಯವಶ್ಯ ಎಂದು ಹೇಳಿದರು.
ಡಾ. ಯೋಗೀಶ್ ತಂತ್ರಿ ಮಾತನಾಡಿ, ಯೋಗ ನಮ್ಮ ಚಿಂತನೆಗಳ ಮೇಲೆ ಪ್ರಭಾವ ಬೀರುತ್ತದೆ. ಇದಿನಿಂದ ಜೂನ್ 21ರವರೆಗೆ ಯೋಗ ಶಿಕ್ಷಕ ಕೌಶಿಕ್ ನೇತೃತ್ವದಲ್ಲಿ ಉಚಿತ ಯೋಗ ತರಬೇತಿ ಶಿಬಿರ ನಡೆಯಲಿದೆ ಎಂದರು.


