ಬಂಟ್ವಾಳ: ಉಪಪ್ರಾಂಶುಪಾಲ ಹಾಗೂ ಉಪನ್ಯಾಸಕಿ ಸೇರಿಕೊಂಡು ವಿದ್ಯಾರ್ಥಿಗಳ  ಮೇಲೆ ವಿನಾಃಕಾರಣ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬುಧವಾರ ತರಗತಿ ಬಹಿಷ್ಕರಿಸಿ ಕಾಲೇಜಿನ ಮುಂದೆ  ಪ್ರತಿಭಟನೆ ನಡೆಸಿದರು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ವಿನಾ ಕಾರಣ ತೊಂದರೆ ನೀಡಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದ ಉಪಪ್ರಾಂಶುಪಾಲ ಡಾ. ಚಿನ್ನಗಿರಿಗೌಡ ಹಾಗೂ ಉಪನ್ಯಾಸಕಿ ತೇಜಶ್ವಿನಿಯವರನ್ನು ಅಮಾನತುಗೊಳಿಸ ಬೇಕು ಅಥವಾ ಇಲ್ಲಿಂದ ತಕ್ಷಣ ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ವಿದ್ಯಾರ್ಥಿಗಳ ಪೋಷಕರೂ ಕೂಡ ಪ್ರತಿಭಟನೆಗೆ ಸಾಥ್ ನೀಡಿ ಉಪನ್ಯಾಸಕರ ವರ್ತನೆಯನ್ನು ಖಂಡಿಸಿದರು. ಕಳೆದ ಕೆಲ ದಿನಗಳಿಂದ ಪಾಲಿಟೆಕ್ನಿಕ್ನ ಉಪನ್ಯಾಸಕರ ನಡುವೆ ಪರಸ್ಪರ ಹೊಗೆಯಾಡುತ್ತಿದ್ದ ಮುಸುಕಿನ ಗುದ್ದಾಟದಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ಬಂದಿದೆ. ಉಪನ್ಯಾಸಕರೊಳಗಿನ ವೈಷಮ್ಯವನ್ನೇ ಮುಂದಿಟ್ಟುಕೊಂಡು ಕಾಲೇಜಿನ ಉಪಪ್ರಾಂಶುಪಾಲ ಡಾ. ಚಿನ್ನಗಿರಿ ಗೌಡ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕಿ ತೇಜಸ್ವಿನಿಯವರು ತರಗತಿ ನಡೆಸದೆ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆಂತರಿಕ ಪರೀಕ್ಷೆಗಳು ಆರಂಭವಾಗಗಲಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತರಗತಿ ನಡೆಸುವಂತೆ ಉಪನ್ಯಾಸಕರನ್ನು ಮನವಿ ಮಾಡಿಕೊಂಡರೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಆದರೂ ವಿದ್ಯಾರ್ಥಿಗಳು ಉಪನ್ಯಾಸಕ ಮೇಲಿನ ಗೌರವದಿಂದ ಸುಮ್ಮನಾಗಿದ್ದರು. ದಿನಕಳೆದಂತೆ ಕಿರುಕುಳ ಅತಿಯಾದಾಗ ಪ್ರಾಂಶುಪಾಲರ ಗಮನಕ್ಕೂ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಕೆಲ ದಿನಗಳ ಹಿಂದೆ ಜಿತೇಶ್ ಎನ್ನುವ ವಿದ್ಯಾರ್ಥಿಯೊಬ್ಬ   ಸಂಘಟನೆಯ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡ ಎನ್ನುವ ವಿಚಾರವನ್ನು ನೆಪವಾಗಿಟ್ಟುಕೊಂಡು ಆತನ ಮೇಲೆ ಗೂಂಡಾ ಎಂಬ ಅಪವಾದವನ್ನು ಉಪನ್ಯಾಸಕಿ ಹೊರಿಸಿದ್ದು ವಿದ್ಯಾರ್ಥಿಗಳನ್ನು ಕೆರಳಿಸಿತ್ತು. ವಿದ್ಯಾರ್ಥಿಗಳ ಮೇಲೆ ಚೀಲ ಎಸೆಯುವುದು, ತಪ್ಪು ಮಾಡದಿದ್ದರೂ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕುಳ್ಳಿರಿಸುವುದು, ಬರವಣೆಗೆಯಲ್ಲಿ ತಪ್ಪು ಕಂಡು ಬಂದರೆ ಪುಸ್ತಕವನ್ನೇ ಹರಿದು ಹಾಕುವ ಪ್ರವೃತ್ತಿ ತೋರುತ್ತಿದ್ದ ಉಪನ್ಯಾಸಕರ ವಿರುದ್ದ ವಿದ್ಯಾರ್ಥಿಗಳು ತಿರುಗಿ ಬಿದ್ದರು. ಉಪಪ್ರಾಂಶುಪಾಲ ಹಾಗೂ ಉಪನ್ಯಾಸಕಿಯ ಕರಿರುಕುಳದಿಂದ ಬೇಸತ್ತು ಹೋದ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿದರು.

By Suddi9

Leave a Reply

Your email address will not be published. Required fields are marked *