ಕೋಲಾರ ದೇಶದಲ್ಲಿ ಸಂಭವಿಸುವ 5 ವರ್ಷದೊಳಗಿನ ಮಕ್ಕಳ ಸಾವಿನಲ್ಲಿ ಶೇ.10 ರಷ್ಟು ಮರಣ ಅತಿಸಾರ ಭೇದಿಯಿಂದ ಆಗುತ್ತದೆ. ಈ ಹಿಂದೆ ಸಾವಿರಕ್ಕೆ ಸಾವಿನ ಪ್ರಮಾಣ 36-40 ಇತ್ತು. ಇದನ್ನು 2025 ರೊಳಗೆ ಮಕ್ಕಳ ಸಾವಿನ ಪ್ರಮಾಣ 25 ಕ್ಕೆ ಇಳಿಸಲು ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಸ್.ಎನ್.ವಿಜಯಕುಮಾರ್ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ-2018 ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ಮೇ28 ರಿಂದ ಜು.9ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಳ್ಳೆಯ ಮಕ್ಕಳ ತಜ್ಞರಿದ್ದು, ಮಕ್ಕಳಿಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದ್ದು, ಮಕ್ಕಳ ಸಾವಿನ ಪ್ರಮಾಣ 22-24 ಕ್ಕೆ ಇಳಿದಿದೆ. ಇದು ಜಿಲ್ಲೆಯ ಹೆಮ್ಮೆಯ ವಿಷಯವಾಗಿದ್ದು, ಈಗಾಗಲೇ ನಾವು ಸರ್ಕಾರದ ಗುರಿ ತಲುಪಿದ್ದೇವೆ ಎಂದು ಹೇಳಿದರು.
ಆರ್.ಸಿ.ಹೆಚ್ ಅಧಿಕಾರಿ ಡಾ. ಚಂದನ್ ಕುಮಾರ್ ಮಾತನಾಡಿ, ಅತಿಸಾರ ಭೇದಿಯಿಂದ ಸಂಭವಿಸುವ ಮರಣವನ್ನು ತಡೆಗಟ್ಟಬಹುದಾಗಿದ್ದು, ಅವಶ್ಯಕತೆಯಿರುವ ಸಮಯದಲ್ಲಿ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆ ನೀಡಿದ್ದಲ್ಲಿ ಮರಣವನ್ನು ತಡೆಗಟ್ಟಬಹುದು. ಇದರ ಜತೆಯಲ್ಲಿ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಚುಚ್ಚುಮದ್ದು ನೀಡುವುದು, ತಾಯಿ ಹಾಲು, ಪೌಷ್ಠಿಕ ಆಹಾರ ಸೇವನೆ, ಶೌಚಾಲಯ ಬಳಸುವುದು, ಶೌಚ ಬಳಸಿದ ನಂತರ ಹಾಗೂ ಆಹಾರ ಸೇವನೆಯ ಮುನ್ನ ಕೈತೊಳೆಯುವ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ಅತಿಸಾರ ಭೇದಿ ನಿಯಂತ್ರಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ(ಪ್ರಭಾರ) ನಾರಾಯಣಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಸಂತ್ ಕುಮಾರ್, ಮಕ್ಕಳ ತಜ್ಞರಾದ ಡಾ.ಶ್ರೀನಾಥ್, ಡಾ. ದೀಪ್ತಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಪ್ರಸನ್ನ, ರೇಣುಕಾದೇವಿ.ಹೆಚ್., ಮಾಲಾ ಉಪಸ್ಥಿತರಿದ್ದರು.

