ಮಂಗಳೂರು: ನಗರದ ಯೆಯ್ಯಾಡಿಯಲ್ಲಿ ಸಿಪಿಎಂ ಪಕ್ಷದ ಪ್ರಚಾರಸಭೆಗೆ ಬಿಜೆಪಿ ಕಾರ್ಯಕರ್ತರು ನುಗ್ಗಿ ಅಡ್ಡಿಪಡಿಸಿದ ಘಟನೆ ನಡೆದಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಯೆಯ್ಯಾಡಿಯಲ್ಲಿ ಸಂಜೆ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೆಲ ಬಿಜೆಪಿ ಕಾರ್ಯಕರ್ತರು ಪ್ರಚಾರ ಸಭೆಗೆ ಅಡ್ಡಿಪಡಿಸಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.
ಮಂಗಳೂರು ನಗರ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಚಾರ ಸಭೆ ಯಯ್ಯಾಡಿಯಲ್ಲಿ ಆಯೋಜನೆಗೊಂಡಿತ್ತು. ಸಿಪಿಐಎಂ ಅಭ್ಯರ್ಥಿಗಳಾದ ಸುನಿಲ್ ಕುಮಾರ್ ಬಜಾಲ್, ಮುನೀರ್ ಕಾಟಿಪಳ್ಳ ಪರ ನಡೆಯುತ್ತಿದ್ದ ಸಭೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಗದ್ದಲವೆಬ್ಬಿಸಿದ್ದು ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಪಿಐಎಂ, ಮಂಗಳೂರಿನಲ್ಲಿ ಸಿಪಿಐಎಂಗೆ ಹೆಚ್ಚುತ್ತಿರುವ ಜನಬೆಂಬಲ ಕಂಡು ಹೆದರಿದ ಬಿಜೆಪಿ, ಸಭೆಯಲ್ಲಿ ಗದ್ದಲವೆಬ್ಬಿಸುವ ಮೂಲಕ ತನ್ನ ಅಭದ್ರತೆಯನ್ನು ಹೊರಹಾಕಿದೆ. ನಾವು ಇದಕ್ಕೆ ಬೆದರುವುದಿಲ್ಲ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ, ಸಿಪಿಐಎಂ ಪಕ್ಷದ ನಗರ ಉತ್ತರದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

