ಬಂಟ್ವಾಳ: ಸರಕಾರಿ ಸೇವಾವಧಿಯಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ವರ್ಗಾವಣೆ, ನಿವೃತ್ತಿ ಸಹಜ ಪ್ರಕ್ರಿಯೆಯಾಗಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ ಸೇವಾ ಧರ್ಮಕ್ಕೆ ನಿಷ್ಠೆ ತೋರಿಸಬೇಕೆಂದು ಎಂದು ತಹಶೀಲ್ದಾರ್, ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿ ಪುರಂದರ ಹೆಗ್ಡೆ ಕರೆ ನೀಡಿದ್ದಾರೆ.
ತಾಲೂಕು ಕಂದಾಯ ನೌಕರರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ತಹಶೀಲ್ದಾರರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲಾ ಇಲಾಖೆಗೂ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖಾ ಸಿಬ್ಬಂದಿ, ಸರಕಾರದ ಧ್ಯೇಯೋದ್ದೇಶ ಹಾಗೂ ಜನರ ಹಿತದೃಷ್ಟಿಯನ್ನು ಕಾಯ್ದುಕೊಳ್ಳುವ ಕಾರ್ಯಕ್ಕೆ ಸನ್ನದ್ಧರಾಗಬೇಕೆಂದು ಸಲಹೆ ನೀಡಿದರು.
ಬಂಟ್ವಾನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಜನಸ್ನೇಹಿಯಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿ, ಆಡಳಿತಾತ್ಮಕ ಸಮಸ್ಯೆ ಪರಿಹರಿಸುತ್ತಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಗಳಾದ ವಾಸು ಶೆಟ್ಟಿ, ಗ್ರೆಟ್ಟಾ ಮಸ್ಕರೇಂಜಸ್, ರಾಜೇಶ್ ನಾಯ್ಕ್, ಸೀತಾರಾಮ, ಹಿರಿಯ ಗ್ರಾಮ ಲೆಕ್ಕಾಧಿಕಾರಿ ಎ.ಪಿ.ಭಟ್, ಸಾಮಾಜಿಕ ಮುಖಂಡ ಅಬೂಬಕ್ಕರ್ ಅಮ್ಮುಂಜೆ, ಪತ್ರಕರ್ತ ಫಾರೂಕ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
ಭೂ ಮಾಪನ ಶಾಖಾ ಮೇಲ್ವಿಚಾರಕ ನಿಸಾರ್ ಅಹ್ಮದ್ ಸ್ವಾಗತಿಸಿ, ಗ್ರಾಮಲೆಕ್ಕಾಧಿಕಾರಿ ತೌಫೀಕ್ ಕಾರ್ಯಕ್ರಮದಲ್ಲಿ ವಂದಿಸಿದರು.
ಹೊಸ ತಹಶೀಲ್ದಾರ್ ನಿಯುಕ್ತಿ: ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ವರ್ಗಾವಣೆಯ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ಜೀನ್ ಮೇರಿ ತೌರೋ ಅವರನ್ನು ಪ್ರಭಾರ ನೆಲೆಯಲ್ಲಿ ನಿಯುಕ್ತಿಗೊಳಿಸಲಾಗಿದೆ.



