
ಅಡ್ಡೂರು: ಕರ್ನಾಟಕದ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಕೆಗೆ ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದ್ದು, ಇದಕ್ಕೆ ಅಡ್ಡೂರು ಪ್ರಜ್ಞಾವಂತ ನಾಗರಿಕರ ಒಕ್ಕೂಟ ತೀವ್ರ ಖಂಡಿಸಿದ್ದು, ಬ್ಯಾಲೆಟ್ ಕಾಗದ ಬಳಕೆಗೆ ಆಗ್ರಹಿಸಿದೆ.
“ದೇಶದ ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗೆ ಮತದಾನ ನೀಡುವ ಹಕ್ಕು ಇರುವುರೊಂದಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸುವ ಮುಕ್ತ ಅವಕಾಶವನ್ನು ಒದಗಿಸಿದೆ. ಆದರೆ ಭಾರತೀಯ ಚುನಾವಣಾ ಆಯೋಗ ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ಕೈಗೆ ತೆಗೆದುಕೊಂಡಿದೆ” ಎಂದು ಕಿಡಿಕಾರಿದೆ.
“ಜಗತ್ತಿನ ಒಟ್ಟು 198 ರಾಷ್ಟ್ರಗಳು, ತಮ್ಮ ಚುನಾವಣೆಗಳಲ್ಲಿ “ಇವಿಎಂ” ಸಂವಿಧಾನ ಬಾಹಿರ, ಇದು ಚುನಾವಣೆ ಬಳಕೆಗೆ ಅನರ್ಹ ಎಂದು ನಿಷೇಧ ಏರಿ ಬ್ಯಾಲೆಟ್ ಕಾಗದಕ್ಕೆ ಅನುವುಮಾಡಿಕೊಟ್ಟಿದೆ. ಆದರೆ ಭಾರತದಲ್ಲಿ ಪ್ರಜೆಗಳಿಗೆ ಮಾರಕವೆನಿಸಿರುವ “ಇವಿಎಂ” ಮತಯಂತ್ರಗಳನ್ನು ಚುನಾವಣೆಗಳಲ್ಲಿ ಬಳಸಲು ಚುನಾವಣಾ ಆಯೋಗ ಮುಂದಾಗುತ್ತಿರುವುದು ದೇಶಕ್ಕೆ ಅಭದ್ರತೆಯನ್ನು ತಂದಿರಿಸಲು ಮುಂದಾಗಿದೆ” ಎಂದು ಗಂಭೀರ ಆರೋಪ ಮಾಡಿದೆ.
“ಮಿಚಿಗನ್ ವಿವಿಯ ಜೆ.ಅಲೆಕ್ಸ್ ಹಾಲ್ಡರ್ಮನ್, ಇಲೆಕ್ಟ್ರಾನಿಕ್ ಫ್ರಂಟಿಯರ್ ಫೌಂಡೇಶನ್‌ನ ಸ್ಥಾಪಕ ಪ್ರಶಸ್ತಿ ವಿಜೇತ ಹರಿ ಕೆ.ಪ್ರಸಾದ್ ಹಾಗೂ ಡಚ್ ಇಂಟರ್ನೆಟ್ ಆದ್ಯ ರೋಪ್ ಗೋಂಗಿಜ್ಪ್ ಸಹಿತ ಐಟಿ ವಿಶೇಷ ತಜ್ಞರ ತಂಡವೊಂದು ಭಾರತೀಯ ಇವಿಎಂ ಒಂದನ್ನು ಬಳಿಸಿ, ಅದನ್ನು 2 ಮಾರ್ಗಗಳಲ್ಲಿಹೇಗೆ ಹ್ಯಾಕ್ ಮಾಡಬಹುದೆಂಬುದರ ಪ್ರಾತ್ಯಕ್ಷಿಕೆಯೊಂದನ್ನು ತೋರಿಸಿಕೊಟ್ಟಿದ್ದಾರೆ” ಎಂದು ಪ್ರತಿಪಾದಿಸಿದೆ.
“ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಗಳಲ್ಲಿ ಇಂತಹ ಕೆಳಮಟ್ಟದ ಇವಿಎಂ ಬಳಸಿ ವಂಚನೆ ಮಾಡುವುದೆಂದರೆ ಕೇವಲ ಮತಗಳನ್ನು ಕದಿಯುವುದಲ್ಲ. ಬದಲಾಗಿ ದೇಶವನ್ನೇ ಕೊಳ್ಳೆ ಹೊಡೆದಂತೆ. ಆದ್ದರಿಂದ ಇವಿಎಂ ಬಳಕೆ ನಿಷೇಧಿಸಿ ಬ್ಯಾಲೆಟ್ ಕಾಗದಕ್ಕೆ ಅವಕಾಶ ನೀಡಬೇಕು” ಎಂದು ಅಡ್ಡೂರು ಪ್ರಜ್ಞಾವಂತ ನಾಗರಿಕರ ಒಕ್ಕೂಟ ಪ್ರಕಟನೆಯಲ್ಲಿ ಕೋರಿದೆ.
