
ರಾಯಚೂರು: ಬಿಜೆಪಿಗರು ಢೋಂಗಿ ಹಿಂದುತ್ವವಾದಿಗಳು. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯುವ ವಿಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಸರಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ಅತಿ ಹೆಚ್ಚು ಸಮಸ್ಯೆ ನೀಡಲಾಗಿದೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಹಾಗೂ ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಯೋಗಿ ಬರಲಿ, ಮೋದಿ ಬರಲಿ ಇಲ್ಲಿನ ಜನತೆ ಶಿವಸೇನೆಯನ್ನು ಬೆಂಬಲಿಸುತ್ತಾರೆ. ಬಿಜೆಪಿ ಅಧಿಕಾರವಧಿಯಲ್ಲಿದ್ದಾಗ ಗೂಂಡಾ ಕಾಯ್ದೆ, ರೌಡಿ ಶೀಟ್, ಗಡೀಪಾರು ಮಾಡಿದೆ. ಹಿಂದುತ್ವಕ್ಕಾಗಿ ದುಡಿದವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲೂ ಶಿವಸೇನೆ ಅಭ್ಯರ್ಥಿಗಳು ಸ್ಪರ್ಧಿಸಿ ಹಿಂದೂಗಳ ಹೆಸರು ಹೇಳಿಕೊಂಡು ಮತ ಪಡೆಯುತ್ತಿದ್ದ ಬಿಜೆಪಿಗೆ ಪಾಠ ಕಲಿಸುತ್ತೇವೆ. ಅಧಿಕಾರ ಕಳೆದುಕೊಂಡ ಬಿಜೆಪಿಗರು ಹಿಂದುತ್ವದ ಬಗ್ಗೆ ಮಾತಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರಕ್ಕೆ ಹಿಂದೂಗಳ ಬಗ್ಗೆ ಗೌರವ ಇದ್ದಿದ್ದರೆ ರಾಮ ಮಂದಿರ ನಿರ್ಮಿಸುತ್ತಿದ್ದರು. ಮಂದಿರ್ ಬನಾಯೆಂಗೇ, ಮಂದಿರ್ ಬನಾಯೆಂಗೇ ಅಂತ ಮಾತ್ರ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಂಗ್ ಕೂಗಿದ ತಕ್ಷಣ ಭಾಷಣ ನಿಲ್ಲಿಸಿದ್ದರು. ಆಗ ಬಿಜೆಪಿಯ ಬಾಲ ಬಾಲಬಡಕರು ಸಿದ್ದರಾಮಯ್ಯರನ್ನು ಟೀಕೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಬಾಂಗ್ ಕೇಳಿ ಭಾಷಣ ನಿಲ್ಲಿಸಿದರು. ಆಗ ಭಕ್ತರು ಪ್ರಧಾನಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂಬ ಸಮಜಾಯಿಷಿ ನೀಡಿದರು. ಬಿಜೆಪಿಯವರು ಡೋಂಗಿ ಎನ್ನಲು ಇದೇ ಸಾಕ್ಷಿ ಎಂದರು.
