
ವಿಶಿಷ್ಠವಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿರುವ ಗೂಗಲ್, ಪ್ರತಿ ಬಾರಿಯಂತೆ ಈ ಬಾರಿಯೂ ಹೊಸಾಗಿ ಗೂಗಲ್ ಡೂಗಲ್ ರಚಿಸಿದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಈ ಬಾರಿಯ ಡೂಗಲ್ ನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಾರಿ ವಿಭಿನ್ನವಾಗಿ ಡೂಗಲ್ ರಚಿಸಿರುವ ಗೂಗಲ್ 12 ಮಹಿಳೆಯರ ಬಗ್ಗೆ ಡೂಗಲ್ ಫೀಚರ್ ಮಾಡಿದೆ. ಆ 12 ಮಹಿಳೆಯರ ಕಾಮಿಕ್‌ಅನ್ನು ಪ್ರಕಟಿಸಿದೆ. ಇದರಲ್ಲಿ ನಮ್ಮ ಬೆಂಗಳೂರು ಮೂಲದ ಕನ್ನಡತಿ ಕಾವೇರಿ ಗೋಪಾಲಕೃಷ್ಣನ್ ಮೊದಲನೆಯವರಾಗಿ ಕಾಣಿಸಿಕೊಂಡಿದ್ದಾರೆ.
ಕಾವೇರಿ ಗೋಪಾಲಕೃಷ್ಣನ್ ಮೂಲತಃ ಕಾಮಿಕ್ ಆರ್ಟಿಸ್ಟ್ ಆಗಿದ್ದು, ಸದ್ಯ ಇಲಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೂಗಲ್ ಡೂಗಲ್ ಗಾಗಿಯೇ ಅವರು ಅಪ್ ಅಂಡ್ ರೂಫ್ ಎನ್ನುವ ಕಾಮಿಕ್ ಒಂದನ್ನು ಬರೆದಿದ್ದಾರೆ. ಇದನ್ನು ಗೂಗಲ್ ಬಳಸಿಕೊಂಡಿದ್ದು, ತನ್ನ ಮಹಿಳಾ ದಿನಾಚರಣೆಯ ಡೂಗಲ್ ಆಗಿ ಬಳಕೆ ಮಾಡಿಕೊಂಡಿದೆ.
ಕಾವೇರಿ ಗೋಪಾಲಕೃಷ್ಣನ್ ರಚಿಸಿರುವ ಕಾಮಿಕ್ನಲ್ಲಿ ಇದರಲ್ಲಿ ಹುಡುಗಿಯೊಬ್ಬಳು ಮನೆಯ ಮಹಡಿಯ ಮೇಲೆ ಕುಳಿತು ಪುಸ್ತಕವನ್ನು ಓದುತ್ತಿರುತ್ತಾಳೆ. ಪ್ರತಿ ಪುಸ್ತಕವನ್ನು ಓದಿ ಮುಗಿಸಿದಾಗ ಆಕೆ ಸ್ವಲ್ಪ ಸ್ವಲ್ಪವೇ ದೊಡ್ಡವಳಾಗುತ್ತಾ ಹೋಗುತ್ತಾಳೆ. ಕೊನೆಗೆ ಹಾರಿ ಹೋಗುತ್ತಾಳೆ.
ಈ ರೀತಿಯಲ್ಲಿ 12 ವಿವಿಧ ಸ್ಟೋರಿಗಳನ್ನು ಗೂಗಲ್ ತನ್ನ ಡೂಗಲ್ ನಲ್ಲಿ ಬಳಕೆ ಮಾಡಿಕೊಂಡಿದೆ. ಅದಕ್ಕಾಗಿಯೇ #HerStoryOurStory ಎನ್ನುವ ಹ್ಯಾಶ್ ಟ್ಯಾಗನ್ನು ಬಳಕೆ ಮಾಡಿಕೊಂಡಿದೆ.
