ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳ ನಿವಾಸಿ ಫರಂಗಿಪೇಟೆ ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿ(28) ಇವರನ್ನು ಕಳೆದ ಶನಿವಾರ ರಾತ್ರಿ ಬಾಡಿಗೆ ನೆಪದಲ್ಲಿ ಕರೆದುಕೊಮಡು ಹೋಗಿ ಬಳಿಕ ನೆತ್ರಕೆರೆ ಎಂಬಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಆರೋಪಿಗಳನ್ನು ಮಾರಿಪಳ್ಳ ನಿವಾಸಿಗಳಾದ ಹಫೀಝ್, ಹನೀಫ್ ಯಾನೆ ಮಾದ ಹನೀಫ್ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ. ಇವರನ್ನು ಶನಿವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಬಂಧಿಸಿ ಮಂಗಳವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಇವರಿಗೆ 15ದಿನಗಳತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಮೂವರ ಬಂಧನದ ಮೂಲಕ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ.
ಈಗಾಗಲೇ ತುಂಬೆ ಸಮೀಪದ ರೊಟ್ಟಿಗುಡ್ಡೆ ನಿವಾಸಿ ಹಳೆರೌಡಿ ನೌಷಾದ್ನ ಸಹೋದರ ಸಿರಾಜ್ ಮತ್ತು ಈತನ ಸ್ನೇಹಿತ ಅಕರ್ುಳ ನಿವಾಸಿ ಧನರಾಜ್, ಸ್ಥಳೀಯ ಪೇರಿಮಾರ್ ನಿವಾಸಿ ಆಸಿಫ್, ಕಡಬ ನಿವಾಸಿ ಶಹಾಬುದ್ದೀನ್ ಮತ್ತು ಆತನ ಸ್ನೇಹಿತ ಉಜಿರೆ ನಿವಾಸಿ ಗಣೇಶ್ ಎಂಬವರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಜೂ 21 ರಂದು ಹಳೆರೌಡಿ ನೌಶಾದ್ ಹತ್ಯೆ ಪ್ರಕರಣದಲ್ಲಿ ರಿಕ್ಷಾ ಚಾಲಕ ರಿಫಾಯಿ ಸಹೋದರ ಭಾಗಿಯಾಗಿದ್ದೇ ಈ ಹತ್ಯೆಗೆ ಕಾರಣ ಎಂಬುದು ತನಿಖೆ ವೇಳೆ ದೃಢಪಟ್ಟಿದ್ದು, ಬಂಧಿತರಿಂದ ಒಟ್ಟು ಎರಡು ಬೈಕ್ ಮತ್ತು ನಾಲ್ಕು ತಲವಾರು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
