ಇಲ್ಲಿನ ಜೈನಬಸದಿಯಲ್ಲಿ ಪರಿವಾರ ದೈವಗಳು ಭೂತಾರಾದನೆ ಸಂದರ್ಭದಲ್ಲಿ ಬಳಸುವ ಎರಡು ಜೊತೆ ಹಿತ್ತಾಳೆ ಗಗ್ಗರ, ಗಂಟೆ, ಪದ್ಮಾವತಿ ದೇವಿ ವಿಗ್ರಹದಲ್ಲಿದ್ದ ಚಿನ್ನದ ಕರಿಮಣಿ, ಬೆಂಡೋಲೆ, ಬಸವನ ವಿಗ್ರಹದ ಚೈನ್, ಮತ್ತಿತರ ಸುಮಾರು ರೂ 50ಸಾವಿರಕ್ಕೂ ಮಿಕ್ಕಿ ಮೌಲ್ಯದ ಸ್ವತ್ತುಗಳನ್ನು ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ.
ಈ ಬಸದಿಯು ಸ್ಥಳೀಯ ಉಳಿ ಗ್ರಾಮದ ಕಕ್ಯಪದವು ರತ್ನಕುಮಾರ್ ಆರಿಗೆುಂಬವರ ಮನೆತನಕ್ಕೆ ಸಂಬಂಧಿಸಿದ್ದು, ಇಲ್ಲಿನ ಪಾಂಡವರಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿ ನೇಮೋತ್ಸವ ವೇಳೆ ಇದೇ ಬಸದಿಯಿಂದ ಭಂಡಾರ ಬರುವ ಸಂಪ್ರದಾಯ ಇದೆ.
ಈ ಭಂಡಾರದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪ್ರತ್ಯೇಕ ಜಾಗದಲ್ಲಿ ತೆಗೆದಿಟ್ಟಿರುವ ಹಿನ್ನೆಲೆಯಲ್ಲಿ ಕಳ್ಳರಿಗೆ ಸಿಕ್ಕಿಲ್ಲ ಎನ್ನಲಾಗಿದೆ.
ಕಳೆದ ಕೆಲವು ಸಮಯದಿಂದ ಬಸದಿಯಲ್ಲಿ ಪ್ರತಿದಿನ ಪೂಜೆ ನಡೆಯದಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸ್ಥಳೀಯ ನಿವಾಸಿ ನಾರಾಯಣ ಬೆಳಂದೂರು ಎಂಬವರು ಎಂದಿನಂತೆ ಬಸದಿಗೆ ಆಗಮಿಸಿದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಹಿಂದೆಯೂ ಇಲ್ಲಿ 4 ಬಾರಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದ್ದು, ಈ ಬಾರಿ ಬಾಗಿಲಿನ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ ಎಂದು ಪುಂಜಾಲಕಟ್ಟೆ ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ರಶ್ಮಿ ಪರಡ್ಡಿ , ಬೆಳ್ತಂಗಡಿ ಇನ್ಸ್ಪೆಕ್ಟರ್ ಲಿಂಗಪ್ಪ ಪೂಜಾರಿ, ಪುಂಜಾಲಕಟ್ಟೆ ಠಾಣಾಧಿಕಾರಿ ಲತನ್ಕುಮಾರ್ ನೇತೃತ್ವದ ಪೊಲೀಸರು ಮಂಗಳವಾರ ಧಾವಿಸಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ.
—
