ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಮತಬೇಟೆಗಾಗಿ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಕೇಸ್ ಗಳನ್ನು ಹಿಂಪಡೆಯುವ ಮೂಲಕ ಆಕ್ರಮಣಕಾರಿ ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಮಾನವ ಹತ್ಯೆ ನಡೆಸುವ ಕೆಲಸ ನಡೆಯುತ್ತಿದೆ. ಇಸ್ಲಾಂ ಮತದಲ್ಲಿ ಜಯಂತಿ ಆಚರಣೆಗೆ ಬೆಲೆಯಿಲ್ಲದಿದ್ದರೂ ಟಿಪ್ಪು ಜಯಂತಿ ನಡೆಸಿದೆ. ಬಹುಮನಿ ಸುಲ್ತಾನ್ ಜಯಂತಿ ಆಚರಣೆ ನಡೆಸಲು ಮುಂದಾಗಿದೆ ಎಂದು ಆರೋಪಿಸಿದರು.
ಸರಕಾರ ಉಗ್ರವಾದಕ್ಕೆ ಪ್ರಚೋದನೆ ಕೊಟ್ಟು ಅಮಾಯಕರಿಗೆ ತೊಂದರೆ ನೀಡುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ, ಸಾಮಾಜಿಕ ಕಾರ್ಯಕರ್ತರಿಗೆ ನೆಮ್ಮದಿಯಿಲ್ಲ. ಶಾಲೆಯಿಂದ ಜೈಲಿನವರೆಗೂ ಡ್ರಗ್ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ. ಶರತ್ ಮಡಿವಾಳ, ಪರೇಶ್ ಮೇಸ್ತ ಸಾವಾದಾಗ ಎರಡು ದಿನಗಳ ಕಾಲ ಕಾದಿರಿಸುವಂತೆ ಸರಕಾರ ಮಾಡಿದೆ ಎಂದು ನಳಿನ್ ಆಕ್ರೋಶ ವ್ಯಕ್ತಪಡಿಸಿದರು.
ಶವಯಾತ್ರೆಗಳು ನಡೆದಾಗ ಕಲ್ಲು ತೂರಾಟ ನಡೆದಿವೆ. ಪಿಎಫ್ ಐ ಕಾರ್ಯಕರ್ತರ ಕೇಸ್ ಹಿಂಪಡೆದಿದ್ದಾರೆ. ಆದರೆ, ಶವಯಾತ್ರೆಯಲ್ಲಿ ಭಾಗವಹಿಸಿದವರ ಮೇಲೆ ಇನ್ನೂ ಕೇಸ್ ಮುಂದುವರಿದಿದೆ ಎಂದು ನಳಿನ್ ಅಸಮಾಧಾನ ವ್ಯಕ್ತಪಡಿಸಿದರು.

