ಬಂಟ್ವಾಳ: ಜಿಲ್ಲೆಯ ಮೂಡುಬಿದ್ರೆ ಸಾವಿರ ಕಂಬಗಳ ಬಸದಿ ಸೇರಿದಂತೆ ಸಾವಿರಾರು ವರ್ಷಗಳ ಹಿಂದೆ ಅನೇಕ ದೇವಸ್ಥಾನ, ದೈವಸ್ಥಾನಗಳು ಯಾವುದೇ ತಂತ್ರಜ್ಞಾನ ಇಲ್ಲದೆಯೂ ಮನುಷ್ಯನ ಇಚ್ಛಾಶಕ್ತಿ ಮತ್ತು ದೇವರ ಮೇಲಿನ ಅಚಲ ಭಕ್ತಿಯಿಂದ ಕಲಾತ್ಮಕವಾಗಿ ರೂಪುಗೊಂಡಿದೆ. ಅದೇ ರೀತಿ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರೂ ಹುಟ್ಟೂರು ಮತ್ತು ಇಲ್ಲಿನ ದೈವ ದೇವರ ಮೇಲಿನ ನಂಬಿಕೆ ಮತ್ತು ಶ್ರದ್ಧೆಯಿಂದ ಮಾವಂತೂರು ರವಿಶಂಕರ ಶೆಟ್ಟಿ ಅವರು ನೂತನ ರಥ ಸಮರ್ಪಿಸಿರುವುದು ಶ್ಲಾಘನೀಯ ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.

ತಾಲ್ಲೂಕಿನ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ರೂ 50ಲಕ್ಷ ವೆಚ್ಚದಲ್ಲಿ ನೂತನ ರಥ ಸಮರ್ಪಿಸಿದ ಮಾವಂತೂರು ರವಿಶಂಕರ ಶೆಟ್ಟಿ ಇವರನ್ನು ದೇವಳದ ವತಿಯಿಂದ ಭಾನುವಾರ ಸಂಜೆ ಧಾರ್ಮಿಕ ಸಭೆಯಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ವಿದೇಶಗಳಲ್ಲಿ ಜನರಿಗೆ ಐಶ್ವರ್ಯ ವೃದ್ಧಿಯಾದಂತೆ ಧಾರ್ಮಿಕ ಕೇಂದ್ರಗಳ ಬಗ್ಗೆ ಧಾರ್ಮಿಕ ಪ್ರಜ್ಞೆ ಇಳಿಮುಖವಾಗುತ್ತಿದ್ದು, ಭಾರತದಲ್ಲಿ ಅಂತಹ ವಾತಾವರಣ ಇಲ್ಲದಿರುವುದು ಇಲ್ಲಿನ ಮಣ್ಣಿನ ಗುಣ ಎಂದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಷ್ಕಲ್ಮಶ ಭಕ್ತಿಯಿಂದ ಮಾತ್ರ ದೇವರ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ ಶುಭ ಹಾರೈಸಿದರು. ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ, ಮೂಡುಬಿದ್ರೆ ಚೌಟರ ಅರಮನೆ ಕುಲದೀಪ್ ಎಂ., ಕ್ಷೇತ್ರದ ಪ್ರಧಾನ ಅರ್ಚಕ ಎ. ರಾಜ ಭಟ್ ಇದ್ದರು. ಇದೇ ವೇಳೆ ರೂ 50ಲಕ್ಷ ವೆಚ್ಚದಲ್ಲಿ ನೂತನ ರಥ ಸಮರ್ಪಿಸಿದ ಅಮ್ಟಾಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ, ಕಲಾಯಿ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಮಾವಂತೂರ ರವಿಶಂಕರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಈ ಕೊಡುಗೆ ದೇವರ ಸಂಕಲ್ಪವಾಗಿದ್ದು, ನನಗೆ ಒದಗಿ ಬಂದ ಸುಯೋಗ ಎಂದು ನಂಬಿರುವುದಾಗಿ ಅವರು ತಿಳಿಸಿದರು.
ಪ್ರಮುಖರಾದ ಹರಿಶ್ಚಂದ್ರ ಪಕ್ಕಳ, ಕೆ.ಹರಿಕೃಷ್ಣ ಬಂಟ್ವಾಳ, ಸುಬ್ಬಯ್ಯ ಶೆಟ್ಟಿ ಬಾರ್ಲಗುತ್ತು, ಅನಂತ ರಾವ್ ಕೊಯಿಲಗುತ್ತು, ದಿವಾಕರ ಶೆಟ್ಟಿ ಸಂಗಬೆಟ್ಟು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಸದಸ್ಯ ಲಕ್ಷ್ಮೀಧರ ಶೆಟ್ಟಿ, ಎ.ರಾಮಣ್ಣ ರೈ ಮಾವಂತೂರು, ರಂಜನ್ ಕುಮಾರ್ ಶೆಟ್ಟಿ, ಉಮೇಶ್ ಡಿ.ಎಂ., ಚಂದ್ರಶೇಖರ ಶೆಟ್ಟಿ ಪಂಬದಬೆಟ್ಟು ಮತ್ತಿತರರು ಇದ್ದರು.
ಮುರಳೀಧರ ಶೆಟ್ಟಿ ಸಂಗಬೆಟ್ಟು ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ ಆಳ್ವ ಅಗ್ಗೊಂಡೆ ವಂದಿಸಿದರು. ಗ್ರಾ.ಪಂ.ಸದಸ್ಯ ಡೊಂಬಯ ಬಿ.ಅರಳ ಕಾರ್ಯಕ್ರಮ ನಿರೂಪಿಸಿದರು.
