ಹೊಸದಿಲ್ಲಿ: ಭಾರತ ಬಿನ್ ಲಾಡೆನ್ ಎಂದು ಕುಖ್ಯಾತಿ ಪಡೆದಿದ್ದ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರ ಮುಖಂಡ ಅಬ್ದುಲ್ ಸುಭಾನ್ ಖುರೈಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
2008, ಜುಲೈ 26ರಂದು ಅಹ್ಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಅಬ್ದುಲ್ ಸುಭಾನ್ ಖುರೈಷಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ನಡೆಸುತ್ತಿದ್ದರು.
ಗುಜರಾತ್ ಎಟಿಎಸ್ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಖುರೇಷಿಯನ್ನು ಬಂಧಿಸಿದ್ದು, ಎಂದು ಖುರೇಷಿ ಅಲಿಯಾಸ್ ತೌಖೀರ್ ವಿವಿಧ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ದಳ ಎನ್ ಐಎಗೆ ಕೂಡ ಬೇಕಾದ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಖುರೈಷಿ ಬಳಿಯಿಂದ ಪಿಸ್ತೂಲ್ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವನು ಸಿಮಿ ಮತ್ತು ಇಂಡಿಯನ್ ಮುಜಾಹಿದೀನ್ ಅನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ವಿಶೇಷ ಪೊಲೀಸ್ ಅಧಿಕಾರಿ ಪ್ರಮೋದ್ ಕುಶ್ವಾಹಾ ಹೇಳಿದರು.
ನಕಲಿ ದಾಖಲೆಗಳೊಂದಿಗೆ ನೇಪಾಳಕ್ಕೆ ತೆರಳಿ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಖುರೇಷಿ 2013 ಮತ್ತು 2015 ರ ನಡುವೆ ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ. ಭಯೋತ್ಪಾದಕ ಜಾಲವನ್ನು ಪುನರುಜ್ಜೀವನಗೊಳಿಸಲು ಭಾರತಕ್ಕೆ ಹಿಂದಿರುಗಿದ ಎಂದು ಪೊಲೀಸರು ತಿಳಿಸಿದ್ದಾರೆ.

